ಮತ್ತದೇ ಫೈನಲ್ ಓವರ್ ಟೆನ್ಷನ್: ಟೀಂ ಇಂಡಿಯಾಕ್ಕೆ ನಂಬಲಸಾಧ್ಯ ಗೆಲುವು
ಶುಕ್ರವಾರ, 31 ಜನವರಿ 2020 (16:41 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ನಾಲ್ಕನೇ ಟಿ20 ಪಂದ್ಯವೂ ಟೈ ಆಗಿ ಸೂಪರ್ ಓವರ್ ನಲ್ಲಿ ಪಂದ್ಯ ಟೀಂ ಇಂಡಿಯಾ ಪಾಲಾಯಿತು. ಇದರೊಂದಿಗೆ ಮತ್ತೆ ನ್ಯೂಜಿಲೆಂಡ್ ಫೈನಲ್ ಓವರ್ ನಲ್ಲಿ ಮುಗ್ಗರಿಸುವ ಚಾಳಿ ಮುಂದುವರಿಸಿತು.
ಅಂತಿಮ ಓವರ್ ನಲ್ಲಿ ಕೀವೀಸ್ ಗೆ ಗೆಲ್ಲಲು ಆರು ಎಸೆತಗಳಲ್ಲಿ 7 ರನ್ ಬೇಕಾಗಿತ್ತು. ಮೊದಲ ಬಾಲ್ ನಲ್ಲೇ ಕಳೆದ ಪಂದ್ಯದಂತೇ ರಾಸ್ ಟೇಲರ್ ವಿಕೆಟ್ ಒಪ್ಪಿಸಿ ನಡೆದರು. ಮೂರನೇ ಎಸೆತದಲ್ಲಿ ಭರ್ಜರಿಯಾಗಿ ಆಡುತ್ತಿದ್ದ ಸೀಫರ್ಟ್ ರನೌಟ್ ಆಗಿ ನಡೆದರು. ಈ ವೇಳೆ ನ್ಯೂಜಿಲೆಂಡ್ 2 ಎಸೆತಗಳಲ್ಲಿ 2 ರನ್ ಬೇಕಾಗಿತ್ತು. ಮುಂದಿನ ಎಸೆತದಲ್ಲಿ ಡೆರಿಲ್ ಮಿಚೆಲ್ ಕೂಡಾ ವಿಕೆಟ್ ಒಪ್ಪಿಸಿ ನಡೆದಾಗ 2 ರನ್ 1 ಬಾಲ್ ಎನ್ನುವ ಸ್ಥಿತಿ ನ್ಯೂಜಿಲೆಂಡ್ ನಿದ್ದಾಯಿತು. ಕೊನೆಯ ಎಸೆತದಲ್ಲಿ ಎರಡನೇ ರನ್ ಗಾಗಿ ಓಡುತ್ತಿದ್ದಾಗ ಸ್ಯಾಂಟ್ನರ್ ರನೌಟ್ ಆದರು. ಇದರಿಂದಾಗಿ ಪಂದ್ಯ ಟೈ ಆಗಿ ಸೂಪರ್ ಓವರ್ ಜಾರಿ ಮಾಡಲಾಯಿತು.
ಮತ್ತೆ ಈ ಬಾರಿಯೂ ಬುಮ್ರಾ ಭಾರತದ ಪರ ಸೂಪರ್ ಓವರ್ ನಲ್ಲಿ ಬೌಲಿಂಗ್ ಮಾಡಿದರು. ಈ ವೇಳೆ ಕೀವೀಸ್ ಬ್ಯಾಟ್ಸ್ ಮನ್ ಗಳು 13 ರನ್ ಗಳಿಸಿ ಭಾರತಕ್ಕೆ ಆರು ಎಸೆತಗಳಲ್ಲಿ 14 ರನ್ ಗಳಿಸುವ ಗೆಲುವಿನ ಗುರಿ ನೀಡಿದರು. ಭಾರತದ ಪರ ಬ್ಯಾಟಿಂಗ್ ಗೆ ಬಂದ ಕೆಎಲ್ ರಾಹುಲ್ ಮೊದಲ ಎಸೆತವನ್ನೇ ಸಿಕ್ಸರ್, ಎರಡನೇ ಎಸೆತವನ್ನು ಬೌಂಡರಿಗಟ್ಟಿ ಗುರಿ ಸುಲಭ ಮಾಡಿದರು. ಆದರೆ ಮರು ಎಸೆತದಲ್ಲಿ ಔಟಾದರು. ಹಾಗಿದ್ದರೂ ಆಗ ಮತ್ತೆ ನಾಲ್ಕು ರನ್ ಗಳ ಅಗತ್ಯವಿತ್ತಷ್ಟೇ. ಇನ್ನೊಂದು ತುದಿಯಲ್ಲಿದ್ದ ವಿರಾಟ್ ಕೊಹ್ಲಿ ಮುಂದಿನ ಎಸೆತದಲ್ಲಿ ಎರಡು ರನ್ ಗಳಿಸಿದರು. ಇದರಿಂದಾಗಿ ಎರಡು ಬಾಲ್ ಗಳಲ್ಲಿ ಎರಡು ರನ್ ಎನ್ನುವ ಸ್ಥಿತಿ ಎದುರಾಯಿತು. ಮುಂದಿನ ಎಸೆತವನ್ನು ಕೊಹ್ಲಿ ಬೌಂಡರಿಗಟ್ಟುವುದರೊಂದಿಗೆ ಭಾರತ ಮತ್ತೊಂದು ಸೂಪರ್ ಓವರ್ ಗೆಲುವು ಸಾಧಿಸಿತು.