ಜೇಮ್ಸ್ ಆಂಡರ್ಸನ್ ಮುಂದೆ ಟೀಂ ಇಂಡಿಯಾ ಬೆತ್ತಲೆ!

ಶುಕ್ರವಾರ, 10 ಆಗಸ್ಟ್ 2018 (16:06 IST)
ಲಾರ್ಡ್ಸ್: ಒಬ್ಬ ಒಳ್ಳೆಯ ಬೌಲರ್ ಮುಂದೆ ಎಂತಹಾ ಬ್ಯಾಟ್ಸ್ ಮನ್ ಆದರೂ ಕೆಲ ಕಾಲ ಪರೀಕ್ಷೆಗೊಳಗಾಲೇಬೇಕು. ಟೀಂ ಇಂಡಿಯಾದ ಬ್ಯಾಟಿಂಗ್ ಯಾವ ಲೆಕ್ಕ? ವಿಶ್ವದ ನಂ.1 ಬೌಲರ್ ಜೇಮ್ಸ್ ಆಂಡರ್ಸನ್ ಮುಂದೆ ಟೀಂ ಇಂಡಿಯಾ ಮಂಡಿಯೂರಿ ಕುಳಿತಿದೆ.
 

ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರಿಸ್ಥಿತಿ ಮೊದಲ ಟೆಸ್ಟ್ ಪಂದ್ಯಕ್ಕಿಂತಲೂ ಹೀನಾಯವಾಗಿತ್ತು.

ಮೊದಲ ಓವರ್ ಎಸೆಯಲು ಬಂದ ಜೇಮ್ಸ್ ಆಂಡರ್ಸನ್ ಐದನೇ ಎಸೆತದಲ್ಲಿ ಮುರಳಿ ವಿಜಯ್ ರನ್ನು ಶೂನ್ಯಕ್ಕೆ ಔಟ್ ಮಾಡಿದರು. ಇದಾದ ಬಳಿಕ ಮೂರು ಓವರ್ ಭಾರತೀಯ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಧೈರ್ಯವೇ ಮಾಡಲಿಲ್ಲ. ಮೊದಲೇ ವೇಗಿಗಳ ಪಿಚ್. ಅದರಲ್ಲೂ ಮಳೆ ಸುರಿದು ಇನ್ನಷ್ಟು ವೇಗಿಗಳಿಗೆ ಸಹಕಾರಿಯಾಗಿದೆ.

ಹೀಗಾಗಿ  ಕಳಪೆ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ರನ್ ಗಳಿಸುವುದಕ್ಕಿಂತ ಹೆಚ್ಚು ವಿಕೆಟ್ ಪಟ ಪಟನೇ ಉರುಳಿಸುವುದರಲ್ಲಿದ್ದಾರೆ. ಆರು ಓವರ್ ಆಗುವಷ್ಟರಲ್ಲಿ ಆರಂಭಿಕ ಕೆಎಲ್ ರಾಹುಲ್ ಕೂಡಾ ಕೇವಲ 8 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಇನ್ನೇನು ಇನ್ನೂ 10 ಓವರ್ ಎಸೆದರೆ ಇಡೀ ಟೀಂ ಇಂಡಿಯಾವೇ ಗಂಟು ಮೂಟೆ ಕಟ್ಟಿ ಪೆವಿಲಿಯನ್ ಸೇರುತ್ತದೋ ಎನ್ನುವಷ್ಟರಲ್ಲಿ ಮಳೆ ಬಂದು ಮಾನ ಕಾಪಾಡಿದೆ.  ಸದ್ಯಕ್ಕೆ ಆಟ ಸ್ಥಗಿತಗೊಂಡಿದ್ದು, ಮಳೆ ನಿಲ್ಲುವವರೆಗೂ ಕಾಯಬೇಕಿದೆ. ಸದ್ಯಕ್ಕೆ ಭಾರತದ ಸ್ಕೋರ್ 2 ವಿಕೆಟ್ ನಷ್ಟಕ್ಕೆ 11 ರನ್.

ಇಂದಿನ ಪಂದ್ಯದಲ್ಲಿ ಕುಲದೀಪ್ ಯಾದವ್ ಮತ್ತು ಚೇತೇಶ್ವರ ಪೂಜಾರ, ಉಮೇಶ್ ಯಾದವ್ ಮತ್ತು ಶಿಖರ್ ಧವನ್ ಸ್ಥಾನದಲ್ಲಿ ಆಡುತ್ತಿದ್ದಾರೆ. ಯಾರು ಬಂದರೂ ಯಾರೇ ಹೋದರೂ ಟೀಂ ಇಂಡಿಯಾ ಪರಿಸ್ಥಿತಿ ಬದಲಾಗಿಲ್ಲ ಎನ್ನುವುದು ವಿಪರ್ಯಾಸ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ