ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಜಡೇಜಾಗೆ ಸರ್ ಎಂಬ ನಿಕ್ ನೇಮ್ ಇದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಬಳಕೆಯಾಗುತ್ತಿದೆ. ಹಾಗಿದ್ದರೆ ಜಡೇಜಾಗೆ ಸರ್ನೇಮ್ ಕೊಟ್ಟವರು ಯಾರು ಎಂದು ತಿಳಿದುಕೊಳ್ಳಿ.
ಟೀಂ ಇಂಡಿಯಾದಲ್ಲಿ ಪ್ರತಿಯೊಬ್ಬ ಕ್ರಿಕೆಟಿಗರಿಗೂ ಒಂದೊಂದು ಅಡ್ಡ ಹೆಸರಿದೆ. ಉದಾಹರಣೆಗೆ ಕೊಹ್ಲಿಗೆ ಚೀಕು, ರೋಹಿತ್ ಗೆ ಹಿಟ್ ಮ್ಯಾನ್, ಅಶ್ವಿನ್ ಗೆ ಆಶ್ ಅಣ್ಣ ಹೀಗೆ ಹೆಚ್ಚಿನ ಕ್ರಿಕೆಟಿಗರಿಗೆ ಸಹ ಕ್ರಿಕೆಟಿಗರು, ಅಭಿಮಾನಿಗಳು ಪ್ರೀತಿಯಿಂದ ಒಂದೊಂದು ಹೆಸರಿಟ್ಟು ಕರೆಯುತ್ತಾರೆ.
ಅದೇ ರೀತಿ ಜಡೇಜಾರನ್ನು ಸರ್ ಜಡೇಜಾ ಎಂದೇ ಅಭಿಮಾನಿಗಳು ಕರೆಯುತ್ತಾರೆ. ಅವರ ಟ್ವಿಟರ್ ಪೇಜ್ ನಲ್ಲೂ ಅವರು ಸರ್ ಜಡೇಜಾ ಎಂದೇ ಹಾಕಿಕೊಂಡಿದ್ದರು. ಜಡೇಜಾಗೆ ಈ ಟೈಟಲ್ ಕೊಟ್ಟಿದ್ದು ಮಾಜಿ ನಾಯಕ, ಸಿಎಸ್ ಕೆ ಹಾಲಿ ನಾಯಕ ಎಂಎಸ್ ಧೋನಿ. ಅದೂ ಐಪಿಎಲ್ ಆಡುವ ಸಂದರ್ಭದಲ್ಲಿಯೇ.
ಜಡೇಜಾರನ್ನು ಮೊದಲ ಬಾರಿಗೆ ಸರ್ ಜಡೇಜಾ ಎಂದು ಕರೆದಿದ್ದು ಧೋನಿ. 2013 ರಲ್ಲಿ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಸಿಎಸ್ ಕೆ ರೋಚಕವಾಗಿ ಗೆದ್ದ ಬಳಿಕ ಜಡೇಜಾ ಬಗ್ಗೆ ಧೋನಿ ಟ್ವೀಟ್ ಮಾಡಿದ್ದರು. ಆ ಟ್ವೀಟ್ ನಲ್ಲಿ ಸರ್ ಜಡೇಜಾ ಎಂದು ಸಂಬೋಧಿಸಿದ್ದರು. ಸರ್ ಜಡೇಜಾಗೆ ಒಂದು ಬಾಲ್ ಕೊಟ್ಟು ಎರಡು ರನ್ ಪಡೆಯಬೇಕು ಎಂದರೆ ಅವರು ಒಂದು ಎಸೆತ ಬಾಕಿ ಇರುವಂತೆಯೇ ಗೆಲ್ಲಿಸಿಕೊಡುತ್ತಾರೆ ಎಂದು ಧೋನಿ ಹೊಗಳಿದ್ದರು.
ಇದಾದ ಬಳಿಕ ಅವರನ್ನು ಅಭಿಮಾನಿಗಳು ಸರ್ ಜಡೇಜಾ ಎಂದೇ ಕರೆಯಲು ಆರಂಭಿಸಿದರು. ಆದರೆ ಜಡೇಜಾ ಹಿಂದೊಮ್ಮೆ ಸಂದರ್ಶನದಲ್ಲಿ ನನಗೆ ಸರ್ ಎಂದು ಕರೆಯಿಸಿಕೊಳ್ಳಲು ಇಷ್ಟವಿಲ್ಲ. ಬೇಕಿದ್ದರೆ ನನಗೆ ಬಾಪು ಎಂದು ಗೌರವದಿಂದ ಕರೆಯಿರಿ. ಆದರೆ ಸರ್ ಎಂದು ಕರೆದರೆ ನನಗೆ ಯಾರೋ ವ್ಯಂಗ್ಯ ಮಾಡುತ್ತಾರೆ ಎನಿಸುತ್ತದೆ ಎಂದಿದ್ದರು. ಹಾಗಿದ್ದರೂ ಅಭಿಮಾನಿಗಳು ಮಾತ್ರ ಅವರನ್ನು ಪ್ರೀತಿಯಿಂದ ಸರ್ ಎಂದು ಕರೆಯುವುದನ್ನು ಬಿಟ್ಟಿಲ್ಲ.