ಒಂದು ಸ್ಥಾನಕ್ಕಾಗಿ ಟೀಂ ಇಂಡಿಯಾದಲ್ಲಿ ಮೂವರ ಪೈಪೋಟಿ

ಬುಧವಾರ, 27 ಸೆಪ್ಟಂಬರ್ 2023 (08:50 IST)
ಮುಂಬೈ: ಟೀಂ ಇಂಡಿಯಾ ಬ್ಯಾಟಿಗರು ಈಗ ಪ್ರತೀ ಪಂದ್ಯದಲ್ಲಿ ಪೈಪೋಟಿಗೆ ಬಿದ್ದಂತೆ ಫಾರ್ಮ್ ಪ್ರದರ್ಶಿಸುತ್ತಿದ್ದಾರೆ, ರನ್ ಮಳೆಯನ್ನೇ ಹರಿಸುತ್ತಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?

ಟೀಂ ಇಂಡಿಯಾದಲ್ಲಿ ಈಗ ಒಬ್ಬ ಬ್ಯಾಟಿಗನ ಸ್ಥಾನಕ್ಕಾಗಿ ಮೂವರ ನಡುವೆ ಫೈಟ್ ಇದೆ. ಹೀಗಾಗಿ ಪ್ರತಿಯೊಬ್ಬರೂ ರನ್ ಗಳಿಸುವ ಒತ್ತಡದಲ್ಲಿದ್ದಾರೆ. ವಿಶ್ವಕಪ್ ನಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದಲೂ ಎಲ್ಲರೂ ತಮಗೆ ಸಿಕ್ಕ ಅವಕಾಶವನ್ನು ಭರಪೂರ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ದೊಡ್ಡ ತಲೆನೋವು ಎದುರಾಗಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ತಂಡಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ. ರೋಹಿತ್ ಗಾಗಿ ಋತುರಾಜ್ ಗಾಯಕ್ ವಾಡ್ ಸ್ಥಾನ ಬಿಟ್ಟುಕೊಡುವುದು ಖಚಿತ. ಆದರೆ ಕೊಹ್ಲಿಗಾಗಿ ಸ್ಥಾನ ಬಿಟ್ಟುಕೊಡುವವರು ಯಾರು ಎಂಬುದೇ ಪ್ರಶ್ನೆ.

ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದಲ್ಲಿ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಆಡುತ್ತಿದ್ದಾರೆ. ಈ ಮೂವರೂ ಈಗಾಗಲೇ ಸೆನ್ಸೇಷನಲ್ ಇನಿಂಗ್ಸ್ ಆಡಿ ಆಯ್ಕೆಗಾರರಿಗೆ ತಲೆನೋವು ತಂದಿಟ್ಟಿದ್ದಾರೆ. ಶ್ರೇಯಸ್ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದರೆ, ಸೂರ್ಯಕುಮಾರ್ ಯಾದವ್ ಕೆಳ ಕ್ರಮಾಂಕದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ರನ್ ಗತಿ ಏರಿಸುತ್ತಿದ್ದಾರೆ. ಇಶಾನ್ ಕಿಶನ್ ತಂಡದ ಅಗತ್ಯಕ್ಕೆ ತಕ್ಕಂತೆ ಇನಿಂಗ್ಸ್ ಆಡಿ ತಮ್ಮ ಉಪಯುಕ್ತತೆ ಸಾರಿದ್ದಾರೆ. ಕೊಹ್ಲಿ ವಾಪಸ್ ಆದರೆ ಮತ್ತೊಂದು ಸ್ಥಾನ ಮಾತ್ರ ಖಾಲಿ ಇರಲಿದ್ದು, ಆ ಸ್ಥಾನಕ್ಕೆ ಈ ಮೂವರು ಬ್ಯಾಟಿಗರು ಪೈಪೋಟಿಗೆ ಬಿದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ