ಮೂರನೇ ಟೆಸ್ಟ್ ನಿಂದ ಕೆಎಲ್ ರಾಹುಲ್ ಔಟ್: ಮತ್ತೊಬ್ಬ ಕನ್ನಡಿಗನಿಗೆ ಅವಕಾಶ

Krishnaveni K

ಮಂಗಳವಾರ, 13 ಫೆಬ್ರವರಿ 2024 (08:25 IST)
Photo Courtesy: Twitter
ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಹೊರಬಿದ್ದಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳದ ಕಾರಣ ಅವರನ್ನು ಹೊರಗಿಡಲಾಗಿದೆ.

ವಿಶೇಷವೆಂದರೆ ಓರ್ವ ಕನ್ನಡಿಗನ ಸ್ಥಾನಕ್ಕೆ ಮತ್ತೋರ್ವ ಕನ್ನಡಿಗನ ಆಗಮನವಾಗಿದೆ. ಕೆಎಲ್ ರಾಹುಲ್ ಸ್ಥಾನಕ್ಕೆ ರಣಜಿ ಟ್ರೋಫಿಯಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದ ಕರ್ನಾಟಕ ತಂಡದ ದೇವದತ್ತ್ ಪಡಿಕ್ಕಲ್ ಗೆ ಅವಕಾಶ ನೀಡಲಾಗಿದೆ. ಹೀಗಾಗಿ ಕನ್ನಡಿಗನ ಸ್ಥಾನಕ್ಕೆ ಕನ್ನಡಿಗನೇ ಆಯ್ಕೆಯಾಗಿರುವುದು ವಿಶೇಷ ಎನ್ನಬಹುದು.

ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಕೆಎಲ್ ರಾಹುಲ್ ದ್ವಿತೀಯ ಪಂದ್ಯದ ವೇಳೆ ತೊಡೆನೋವಿನಿಂದಾಗಿ ಹೊರಗುಳಿದಿದ್ದರು. ಬಳಿಕ ಕೊನೆಯ ಮೂರು ಪಂದ್ಯಗಳಿಗೆ ಮೊನ್ನೆಯಷ್ಟೇ ತಂಡ ಆಯ್ಕೆ ಮಾಡಲಾಗಿತ್ತು. ಆಗ ಫಿಟ್ನೆಸ್ ಸಾಬೀತುಪಡಿಸಿದರೆ ಕೆಎಲ್ ರಾಹುಲ್ ಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು.

ಮೊನ್ನೆಯಷ್ಟೇ ರಾಹುಲ್ ತಾವು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಇದರಿಂದಾಗಿ ರಾಹುಲ್ ಆಡುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅವರು ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಸದ್ಯಕ್ಕೆ ಅವರು ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಈಗಾಗಲೇ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಿಂದ ಟೀಂ ಇಂಡಿಯಾ ಮಧ್ಯಮ ಕ್ರಮಾಂಕ ಬಡವಾಗಿದೆ. ಇದೀಗ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಕಿರಿಯರೇ ಇಂಗ್ಲೆಂಡ್ ನಂತಹ ಪ್ರಬಲ ತಂಡವನ್ನು ಎದುರಿಸಬೇಕಿದೆ. ಸರಣಿ ಈಗ 1-1 ರಿಂದ ಸಮಬಲಗೊಂಡಿರುವುದರಿಂದ ಮುಂದಿನ ಪಂದ್ಯಗಳಲ್ಲಿ ತೀವ್ರ ಪೈಪೋಟಿಯಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ