ರಾಜ್ ಕೋಟ್: ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನಾಡಲು ರಾಜ್ ಕೋಟ್ ಗೆ ಬಂದಿಳಿದ ಇಂಗ್ಲೆಂಡ್ ಆಟಗಾರರಲ್ಲಿ ಒಬ್ಬರಾದ ರೆಹಾನ್ ಅಹ್ಮದ್ ರನ್ನು ವಿಮಾನ ನಿಲ್ದಾಣ ಸಿಬ್ಬಂದಿ ತಡೆದರು.
ಎರಡನೇ ಟೆಸ್ಟ್ ಪಂದ್ಯದ ಬಳಿಕ ಇಂಗ್ಲೆಂಡ್ ತಂಡ ಭಾರತದಿಂದ ಅಬುದಾಬಿಗೆ ತೆರಳಿತ್ತು. ಕೆಲವು ದಿನದ ವಿಶ್ರಾಂತಿ, ಅಭ್ಯಾಸದ ಬಳಿಕ ಇದೀಗ ರಾಜ್ ಕೋಟ್ ಗೆ ಬಂದಿಳಿದಿದೆ. ಆದರೆ ಭಾರತಕ್ಕೆ ಬಂದಿಳಿದಾಗ ಇಂಗ್ಲೆಂಡ್ ಆಟಗಾರನ ವೀಸಾ ಸಮಸ್ಯೆಯಿಂದಾಗಿ ಅಧಿಕಾರಿಗಳು ತಡೆ ಹಿಡಿದರು.
ವಾಸ್ತವವಾಗಿ ರೆಹಾನ್ ಸಿಂಗಲ್ ಎಂಟ್ರಿ ವೀಸಾ ಹೊಂದಿದ್ದರು. ಸುದೀರ್ಘ ಮಾತುಕತೆಯ ಬಳಿಕ ರೆಹಾನ್ ಗೆ ಇಂಗ್ಲೆಂಡ್ ತಂಡದ ಜೊತೆ ಹೋಟೆಲ್ ಗೆ ತೆರಳಲು ಅವಕಾಶ ನೀಡಲಾಯಿತು. ಆದರೆ 24 ಗಂಟೆಯೊಳಗೆ ದಾಖಲೆ ಸರಿಪಡಿಸಲು ಅವಕಾಶ ನೀಡಲಾಗಿದೆ. ಫೆಬ್ರವರಿ 15 ರಂದು ಮೂರನೇ ಪಂದ್ಯ ನಡೆಯಲಿದ್ದು, ಅದಕ್ಕೆ ಮೊದಲು ರೆಹಾನ್ ತಮ್ಮ ವೀಸಾ ಸಮಸ್ಯೆ ಸರಿಪಡಿಸಿಕೊಳ್ಳಬೇಕಿದೆ.
ಎರಡು ದಿನಗಳೊಳಗೆ ರೆಹಾನ್ ಮತ್ತೆ ವೀಸಾ ಮಾಡಿಸಬೇಕು. ಅಲ್ಲಿಯವರೆಗೆ ಮಾತ್ರ ಅವರಿಗೆ ಇಂಗ್ಲೆಂಡ್ ತಂಡದೊಂದಿಗೆ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಒಂದು ವೇಳೆ ವೀಸಾ ಸಮಸ್ಯೆ ಬಗೆಹರಿಯದಿದ್ದರೆ ಅವರು ಕೂಡಾ ಭಾರತ ಬಿಟ್ಟು ತೆರಳಬೇಕಾಗುತ್ತದೆ. ಇದಕ್ಕೆ ಮೊದಲು ಭಾರತ ಪ್ರವಾಸ ಆರಂಭದಲ್ಲಿ ಇಂಗ್ಲೆಂಡ್ ಆಟಗಾರ ಶೊಯೇಬ್ ಬಾಶಿರ್ ಕೂಡಾ ವೀಸಾ ಸಮಸ್ಯೆಯಿಂದ ತಡವಾಗಿ ಭಾರತಕ್ಕೆ ಆಗಮಿಸಿದ್ದರು.