ಟಿ20 ವಿಶ್ವಕಪ್ ನಲ್ಲಿ ಅವಮಾನಿಸಿದ ಬೇಸರದಲ್ಲಿ ದೊಡ್ಡ ನಿರ್ಧಾರಕ್ಕೆ ಕೈ ಹಾಕಿದ ಮಿಥಾಲಿ ರಾಜ್?!

ಮಂಗಳವಾರ, 27 ನವೆಂಬರ್ 2018 (09:28 IST)
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸಚಿನ್ ತೆಂಡುಲ್ಕರ್ ಎಂದೇ ಪರಿಗಣಿತವಾಗಿರುವ ಸ್ಟಾರ್ ಆಟಗಾರ್ತಿ ಮಿಥಾಲಿ ರಾಜ್ ವಿಶ್ವಕಪ್ ಸೆಮಿಫೈನಲ್ ನಲ್ಲಿ ತಮ್ಮನ್ನು ಆಡಿಸದೇ ಅವಮಾನಿಸಿದ್ದಕ್ಕೆ ಟಿ20 ಕ್ರಿಕೆಟ್ ಗೇ ಗುಡ್ ಬೈ ಹೇಳಲು ಚಿಂತನೆ ನಡೆಸಿದ್ದಾರೆ.

ಈಗಾಗಲೇ ಮಿಥಾಲಿ ಇದು ನನ್ನ ಕೊನೆಯ ಟಿ20 ವಿಶ್ವಕಪ್ ಎಂದಿದ್ದರು. ಆದರೆ ಇತರ ಟಿ20 ಟೂರ್ನಿಗಳಲ್ಲಿ ಮುಂದುವರಿಯುವ ಇಂಗಿತ ಹೊಂದಿದ್ದರು. ಆದರೆ ವಿಶ್ವಕಪ್‍ ನಲ್ಲಿ ತಂಡ ತಮ್ಮನ್ನು ನಡೆಸಿಕೊಂಡ ರೀತಿಗೆ ಬೇಸರಗೊಂಡಿರುವ 34 ವರ್ಷದ ಮಿಥಾಲಿ ನಿವೃತ್ತಿ ಹೇಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಟಿ20 ಕ್ರಿಕೆಟ್ ನಲ್ಲಿ ಪುರುಷ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗಿಂತಲೂ ಹೆಚ್ಚು ರನ್ ಸಿಡಿಸಿರುವ ಮಿಥಾಲಿಗೆ ವಿಶ್ವಕಪ್ ನಲ್ಲಿ ಫಾರ್ಮ್ ನಲ್ಲಿದ್ದಾಗ್ಯೂ ತಂಡ ಕಡೆಗಣಿಸಿತ್ತು. ಮೊದಲ ಪಂದ್ಯದಲ್ಲಿ ಅವಕಾಶ ಸಿಗದೇ ಮತ್ತೆರಡು ಪಂದ್ಯಗಳಲ್ಲಿ ಅವಕಾಶ ಸಿಕ್ಕಾಗ ಮಿಥಾಲಿ ಅರ್ಧಶತಕ ಗಳಿಸಿ ತಂಡದ ಗೆಲುವಿನ ರೂವಾರಿಯಾಗಿದ್ದರು.

ಆಸ್ಟ್ರೇಲಿಯಾ ವಿರುದ್ಧ ಲೀಗ್ ಪಂದ್ಯದಲ್ಲಿ ಅವರು ಗಾಯದಿಂದಾಗಿ ಆಡಿರಲಿಲ್ಲ. ಆದರೆ ಸೆಮಿಫೈನಲ್ ನಲ್ಲಿ ಫಿಟ್ ಆಗಿದ್ದರೂ ಆಡಿಸದೇ ಇದ್ದದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ನಾಯಕಿ ಹರ್ಮನ್ ಪ್ರೀತ್ ಕೌರ್ ಮಿಥಾಲಿಯನ್ನು ಆಡಿಸದೇ ಇದ್ದಿದ್ದಕ್ಕೆ ಪಶ್ಚಾತ್ತಾಪವಿಲ್ಲ ಎಂದು ಹೇಳಿಕೆ ನೀಡಿದ್ದು ಮತ್ತಷ್ಟು ವೈಮನಸ್ಯದ ಕಿಡಿ ಹೊರಹಾಕಿತ್ತು. ಇದೀಗ ಬಿಸಿಸಿಐ ಇಬ್ಬರನ್ನೂ ಕರೆಸಿ ಮಾತುಕತೆಗೆ ಮುಂದಾಗಿದೆ.

ಹಾಗಿದ್ದರೂ ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಅನಿಶ್ಚಿತತೆ ಇರುವುದರಿಂದ ಕಳೆದ ಕೆಲವು ದಿನಗಳಿಂದ ಮಿಥಾಲಿ ಬೇಸರದಲ್ಲಿದ್ದಾರೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಟಿ20 ಕ್ರಿಕೆಟ್ ಗೆ ಈ ಸ್ಟಾರ್ ಆಟಗಾರ್ತಿ ನಿವೃತ್ತಿ ಹೇಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ