ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗುತ್ತಿದ್ದಂತೇ ಇತ್ತ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಅಂಶ ಬಯಲಾಗಿದೆ.
ವಿರಾಟ್ ಕೊಹ್ಲಿ ಮತ್ತು ಗಂಭೀರ್ ನಡುವೆ ಈ ಹಿಂದೆ ಐಪಿಎಲ್ ಟೂರ್ನಿಗಳ ನಡುವೆ ನಡೆದಿದ್ದ ಕಿತ್ತಾಟಗಳು ಎಲ್ಲರಿಗೂ ಗೊತ್ತಿರುವುದೇ. ಹೀಗಾಗಿ ಗಂಭೀರ್ ರನ್ನು ಕೋಚ್ ಆಗಿ ನೇಮಿಸಿದರೆ ತಂಡದಲ್ಲಿ ಸಾಮರಸ್ಯವಿರಬಹುದೇ ಎಂದು ಅನೇಕರು ಅನುಮಾನ ಪಟ್ಟಿದ್ದರು.
ಗಂಭೀರ್ ರನ್ನು ಕೋಚ್ ಆಗಿ ನೇಮಿಸುವುದನ್ನು ಕೊಹ್ಲಿ ಅಭಿಮಾನಿಗಳು ನೇರಾ ನೇರವಾಗಿ ವಿರೋಧಿಸಿದ್ದರು. ಆದರೆ ಈಗ ಗಂಭೀರ್ ಕೋಚ್ ಆಗಿ ನೇಮಕವಾದ ಬೆನ್ನಲ್ಲೇ ಕೊಹ್ಲಿ ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತನಾಡಿ ಆ ಎಲ್ಲಾ ಗೊಂದಲ, ಆತಂಕವನ್ನು ನಿವಾರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತನಾಡಿದ್ದ ಕೊಹ್ಲಿ, ನನಗೆ ಗಂಭೀರ್ ಜೊತೆ ಕೆಲಸ ಮಾಡಲು ಯಾವುದೇ ಸಮಸ್ಯೆಯಿಲ್ಲ. ಹಿಂದೆ ಆಗಿದ್ದನ್ನೆಲ್ಲಾ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ.ಹಳೆಯ ಘಟನೆಗಳು ಆಟದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅಭಯ ನೀಡಿದ್ದಾರೆ ಎಂಬ ಮಾಹಿತಿಯಿದೆ. ಇದು ಅಭಿಮಾನಿಗಳೂ ಸಮಾಧಾನಪಡುವಂತಾಗಿದೆ.