Virat Kohli: ಟೀಂ ಇಂಡಿಯಾ ಸೇರಬೇಕಾದ್ರೆ ಏನು ಮಾಡ್ಬೇಕು: ಬಾಲಕನ ಪ್ರಶ್ನೆಗೆ ವಿರಾಟ್ ಕೊಹ್ಲಿ ಉತ್ತರವೇನು ವಿಡಿಯೋ ನೋಡಿ

Krishnaveni K

ಬುಧವಾರ, 29 ಜನವರಿ 2025 (12:35 IST)
Photo Credit: X
ನವದೆಹಲಿ: ದೆಹಲಿ ತಂಡದ ಜೊತೆಗೆ ರಣಜಿ ಟ್ರೋಫಿ ಪಂದ್ಯ ಆಡಲು ಅಭ್ಯಾಸ ನಡೆಸುತ್ತಿದ್ದಾಗ ಬಾಲಕನೊಬ್ಬ ಟೀಂ ಇಂಡಿಯಾ ಸೇರಲು ಏನು ಮಾಡಬೇಕು ಎಂದು ಕೇಳಿದ ಪ್ರಶ್ನೆಗೆ ವಿರಾಟ್ ಕೊಹ್ಲಿ ನೀಡಿದ ಉತ್ತರ ಈಗ ವೈರಲ್ ಆಗಿದೆ.

ನಾಳೆಯಿಂದ ಆರಂಭವಾಗಲಿರುವ  ರೈಲ್ವೇಸ್ ವಿರುದ್ಧದ ರಣಜಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ತವರು ದೆಹಲಿ ಪರ ಕಣಕ್ಕಿಳಿಯುತ್ತಿದ್ದಾರೆ. ಬರೋಬ್ಬರಿ 12 ವರ್ಷಗಳ ಬಳಿಕ ಕೊಹ್ಲಿ ರಣಜಿ ಪಂದ್ಯವಾಡುತ್ತಿರುವುದು ವಿಶೇಷವಾಗಿದೆ. ಇದಕ್ಕಾಗಿ ಅವರು ದೆಹಲಿ ತಂಡದ ಜೊತೆ ಅಭ್ಯಾಸವನ್ನೂ ನಡೆಸುತ್ತಿದ್ದಾರೆ.

ಅಭ್ಯಾಸದ ವೇಳೆ ಅವರ ಬಾಲ್ಯದ ಗೆಳೆಯ ಶಾವೇಝ್ ಖಾನ್ ತಮ್ಮ ಮಗನ ಸಮೇತ ಮೈದಾನಕ್ಕೆ ಬಂದು ಭೇಟಿ ಮಾಡಿದ್ದಾರೆ. ಅದೂ 10 ವರ್ಷಗಳ ಬಳಿಕ ಗೆಳೆಯರಿಬ್ಬರೂ ಭೇಟಿಯಾಗಿದ್ದಾರೆ. ಈ ಖುಷಿ ಒಂದು ಕಡೆಯಾದರೆ ಶಾವೇಝ್ ತಮ್ಮ ಪುತ್ರನನ್ನೂ ಜೊತೆಗೆ ಕರೆದುಕೊಂಡು ಬಂದಿದ್ದರು.

ಆತನಿಗೂ ಕ್ರಿಕೆಟ್ ಮೇಲೆ ಆಸಕ್ತಿಯಿದೆ. ಹೀಗಾಗಿ ಕೊಹ್ಲಿಯನ್ನು ಕಂಡೊಡನೆ ನಾನೂ ಟೀಂ ಇಂಡಿಯಾ ಸೇರಬೇಕು ಎಂದರೆ ಏನು ಮಾಡಬೇಕು ಎಂದು ಕೊಹ್ಲಿಗೆ ಬಾಲಕ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರಿಸಿದ ಕೊಹ್ಲಿ, ‘ನಿನಗೆ ಯಾರಾದರೂ ಪ್ರಾಕ್ಟೀಸ್ ಮಾಡು ಎಂದು ಹೇಳಲು ಅವಕಾಶವೇ ಕೊಡಬಾರದು. ಒಂದು ವೇಳೆ ಯಾರಾದರೂ 1 ಗಂಟೆ ಪ್ರಾಕ್ಟೀಸ್ ಮಾಡಲು ಹೇಳಿದರೆ ನೀನು 2 ಗಂಟೆ ಪ್ರಾಕ್ಟೀಸ್ ಮಾಡು. ಯಾರಾದರೂ 50 ರನ್ ಗಳಿಸಿದರೆ ನೀನು 100 ರನ್ ಗಳಿಸಲು ಪ್ರಯತ್ನಿಸು. ಬೆಂಚ್ ಮಾರ್ಕ್ ಏನಿದೆ ಅದರ ಡಬಲ್ ಕೆಲಸ ಮಾಡಲು ಪ್ರಯತ್ನಿಸು. ಆಗ ನೀನು ಅಲ್ಲಿ ತಲುಪಬಹುದು’ ಎಂದು ಕೊಹ್ಲಿ ಹೇಳುತ್ತಾರೆ. ಅವರ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VIDEO OF THE DAY ????

- A lovely interaction between Virat Kohli & young fan during the Ranji Trophy Practice session. pic.twitter.com/hWxS3gtTBT

— Johns. (@CricCrazyJohns) January 28, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ