ಬ್ರಿಸ್ಬೇನ್: ಟೀಂ ಇಂಡಿಯಾ ಬ್ಯಾಟಿಂಗ್ ಕಿಂಗ್ ಎಂದೇ ಕರೆಯಿಸಿಕೊಳ್ಳುವ ವಿರಾಟ್ ಕೊಹ್ಲಿ ತಮ್ಮ ಹಳೆಯ ಫಾರ್ಮ್ ಪ್ರದರ್ಶಿಸದೇ ಕಾಲವೇ ಆಗಿ ಹೋಗಿದೆ. ಕೊಹ್ಲಿ ಪದೇ ಪದೇ ಮಾಡಿದ ತಪ್ಪನ್ನೇ ಮಾಡಿ ಔಟಾಗುತ್ತಿರುವುದು ನೋಡಿದರೆ ಅವರು ಕ್ರಿಕೆಟ್ ದೇವರು ಸಚಿನ್ ರಿಂದ ಈ ಒಂದು ಪಾಠವನ್ನು ಕಲಿಯಲೇಬೇಕಿದೆ.
ಪದೇ ಪದೇ ಆಫ್ ಸ್ಟಂಪ್ ಆಚೆ ಹೋಗುವ ಚೆಂಡನ್ನು ಕೆಣಕಲು ಹೋಗಿ ಸ್ಲಿಪ್ ನಲ್ಲೇ ಕ್ಯಾಚ್ ನೀಡಿ ಔಟಾಗುವ ಮೂಲಕ ಕೊಹ್ಲಿ ಮಾಡಿದ ತಪ್ಪನ್ನೇ ಪುನರಾವರ್ತಿಸುತ್ತಿದ್ದಾರೆ. ಇದರಿಂದಾಗಿ ಅವರು ಇತ್ತೀಚೆಗಿನ ದಿನಗಳಲ್ಲಿ ಎಂದಿನ ಫಾರ್ಮ್ ನ್ನೇ ಪ್ರದರ್ಶಿಸುತ್ತಿಲ್ಲ. ಆಸ್ಟ್ರೇಲಿಯಾ ಸರಣಿಯಲ್ಲಿ ಒಂದು ಶತಕ ಸಿಡಿಸಿದ್ದರಾದರೂ ಅದರಲ್ಲಿ ಎಂದಿನ ಹೊಳಪು ಇರಲಿಲ್ಲ.
ಕೊಹ್ಲಿ ತಪ್ಪಿನ ಪುನರಾವರ್ತನೆ ಮಾಡುತ್ತಿರುವುದು ನೋಡಿ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ. ತಮ್ಮ ಆರಾಧ್ಯ ದೈವ ಎಂದು ಪರಿಗಣಿಸುವ ಸಚಿನ್ ರಿಂದ ಕೊಹ್ಲಿ ಕಲಿಯಬೇಕಾದ್ದು ತುಂಬಾ ಇದೆ. ಕೊಹ್ಲಿಯನ್ನು ಯಾವತ್ತು ತೆಂಡುಲ್ಕರ್ ಗೆ ಹೋಲಿಕೆ ಮಾಡಬೇಡಿ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅದಕ್ಕೆ ಕಾರಣವೂ ಇದೆ. 2003 ರಲ್ಲಿ ಸಚಿನ್ ಕೆಟ್ಟ ಫಾರ್ಮ್ ನಲ್ಲಿದ್ದರು. 13 ಬಾರಿ ಅವರು ತಮ್ಮ ಫೇವರಿಟ್ ಕವರ್ ಡ್ರೈವ್ ಹೊಡೆಯಲು ಹೋಗಿ ಔಟಾಗಿದ್ದರು. ಇದರಿಂದ ಬೇಸತ್ತ ಅವರು ಆಸ್ಟ್ರೇಲಿಯಾ ವಿರುದ್ಧ ಸಿಡ್ಇಯ್ಲಿ ನಡೆದ ಪಂದ್ಯದಲ್ಲಿ ಒಂದೆ ಒಂದು ಕವರ್ ಡ್ರೈವ್ ಹೊಡೆಯದೇ ಇರಲು ತೀರ್ಮಾನಿಸಿದರು. ಅಂದು ಅವರು ತಮ್ಮ ಫೇವರಿಟ್ ಶಾಟ್ ನ್ನು ಮರೆತು ಆಡಿದ್ದರಿಂದ ಬರೋಬ್ಬರಿ 241 ರನ್ ಹೊಡೆದಿದ್ದರು. ಸಚಿನ್ ರ ಈ ತಪಸ್ಸಿನಂತಹ ಇನಿಂಗ್ಸ್ ನ್ನು ನೋಡಿ ಕೊಹ್ಲಿಯೂ ಕಲಿಯಬೇಕಿದೆ ಎಂದು ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ.