ಪ್ರಸಿದ್ಧ ಕೃಷ್ಣ ಮೇಲೆ ಮೈದಾನದಲ್ಲೇ ಕೆಂಡವಾದ ವಿರಾಟ್ ಕೊಹ್ಲಿ

ಸೋಮವಾರ, 29 ಮಾರ್ಚ್ 2021 (10:16 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದ ರೋಚಕ ಘಟ್ಟದಲ್ಲಿ ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ ಮೇಲೆ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲೇ ಅಸಮಾಧಾನ ತೋರಿದ ಘಟನೆ ನಡೆದಿದೆ.


ಪ್ರಸಿದ್ಧ ನಿನ್ನೆಯ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ತೀರಾ ದುಬಾರಿಯಾದರು. ಅವರು ತಮ್ಮ 7 ಓವರ್ ಗಳ ಕೋಟಾದಲ್ಲಿ ಬರೋಬ್ಬರಿ 62 ರನ್ ನೀಡಿದ್ದರು. ಒಂದು ವೇಳೆ ಭಾರತ ನಿನ್ನೆ ಸೋತಿದ್ದರೆ ಅವರ ಈ ನಿಯಂತ್ರಣವಿಲ್ಲದ ದಾಳಿಯೇ ಕಾರಣವಾಗುತ್ತಿತ್ತೇನೋ. ಅದೃಷ್ವವಶಾತ್ ಭಾರತ 7 ರನ್ ಗಳ ಜಯ ಗಳಿಸಿತು.

ಆದರೆ 49 ನೇ ಓವರ್ ನಲ್ಲಿ ಮಾಡು ಇಲ್ಲವೇ ಮಡಿ ಎನ್ನುವ ಪರಿಸ್ಥಿತಿ ಇದ್ದಾಗ ಪ್ರಸಿದ್ಧ ಮಿಸ್ ಫೀಲ್ಡ್ ಕೂಡಾ ಮಾಡಿ ನಾಯಕ ಕೊಹ್ಲಿ ಕೆಂಗಣ್ಣಿಗೆ ಗುರಿಯಾದರು. ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ 49 ನೇ ಓವರ್ ನ ಮೊದಲ ಎಸೆತದಲ್ಲಿ ಸೆಟ್ ಬ್ಯಾಟ್ಸ್ ಮನ್ ಆಗಿದ್ದ ಸ್ಯಾಮ್ ಕ್ಯುರೇನ್ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದರು. ಹೇಗಾದರೂ ಸ್ಟ್ರೈಕ್ ತಮ್ಮ ಕಡೆಗೆ ಬರುವಂತೆ ಮಾಡಲು ಹವಣಿಸುತ್ತಿದ್ದ ಸ್ಯಾಮ್ ಕ್ಯುರೇನ್ ಬಳಿಕ ದೊಡ್ಡ ಹೊಡೆತ ಕೈ ಹಾಕಿ ತಂಡಕ್ಕೆ ಗೆಲುವು ಕೊಡಿಸಲು ಹವಣಿಸುತ್ತಿದ್ದರು.

ಆದಷ್ಟು ಅವರಿಗೆ ಸ್ಟ್ರೈಕ್ ಸಿಗದಂತೆ ನೋಡಿಕೊಳ್ಳುವುದು ಭಾರತದ ಪ್ಲ್ಯಾನ್ ಆಗಿತ್ತು. ಆದರೆ ಎರಡನೇ ಎಸೆತದಲ್ಲಿ ಮಾರ್ಕ್ ವುಡ್ ಹೊಡೆದ ಚೆಂಡನ್ನು ಸರಿಯಾಗಿ ಹಿಡಿಯದ ಪ್ರಸಿದ್ಧ ಕೃಷ್ಣ ಮಿಸ್ ಫೀಲ್ಡ್ ಮಾಡಿದರು. ಇದರಿಂದಾಗಿ ವುಡ್ ಮತ್ತು ಕ್ಯುರೇನ್ ಒಂಟಿ ರನ್ ತೆಗೆದರು. ಮತ್ತೆ ಕ್ಯುರೇನ್ ಗೆ ಸ್ಟ್ರೈಕ್ ಸಿಕ್ಕಿತು. ಇದರಿಂದಾಗಿ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಬಹಿರಂಗವಾಗಿಯೇ ಪ್ರಸಿದ್ಧ ಮೇಲೆ ಅಸಮಾಧಾನ ಪ್ರದರ್ಶಿಸಿದರು. ಒಂದು ವೇಳೆ ಕ್ಯುರೇನ್ ದೊಡ್ಡ ಹೊಡೆತ ಹೊಡೆದು ಇಂಗ್ಲೆಂಡ್ ಗೆದ್ದಿದ್ದರೆ ಪ್ರಸಿದ್ಧ ಕೃಷ್ಣ ಮಾಡಿದ ಈ ತಪ್ಪು ಭಾರತಕ್ಕೆ ದುಬಾರಿಯಾಗುತ್ತಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ