ಸಾಮಾನ್ಯವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ, ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ತಂಡದ ಪಾಲಾಗುತ್ತದೆ. ಆದರೆ ಈ ಸರಣಿಯಲ್ಲಿ ಎರಡೂ ಪ್ರಶಸ್ತಿಗಳನ್ನೂ ಭಾರತ ತಂಡದಲ್ಲಿ ಅರ್ಹರಿದ್ದರೂ ಎದುರಾಳಿ ತಂಡಕ್ಕೆ ನೀಡಲಾಗಿದೆ. ನಿನ್ನೆಯ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ ಇಂಗ್ಲೆಂಡ್ ನ ಸ್ಯಾಮ್ ಕ್ಯುರೇನ್ ಗೆ ನೀಡಲಾಗಿದ್ದರೆ, ಈ ಸರಣಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಇಂಗ್ಲೆಂಡ್ ತಂಡದ ಜಾನಿ ಬೇರ್ ಸ್ಟೋಗೆ ನೀಡಲಾಗಿದೆ. ಇದು ಕೊಹ್ಲಿ ಅಸಮಾಧಾನಕ್ಕೆ ಗುರಿಯಾಗಿದೆ.
ಪ್ರಶಸ್ತಿ ಸಮಾರಂಭದಲ್ಲಿ ಕೊಹ್ಲಿ ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಶ್ರಾದ್ಧೂಲ್ ಗೆ ಪಂದ್ಯ ಶ್ರೇಷ್ಠ ಮತ್ತು ಈ ಸರಣಿಯುದ್ದಕ್ಕೂ ಕಡಿಮೆ ಎಕಾನಮಿ ರೇಟ್ ನಲ್ಲಿ ಬೌಲಿಂಗ್ ಮಾಡಿ ವಿಕೆಟ್ ಕಿತ್ತ ಭುವನೇಶ್ವರ್ ಕುಮಾರ್ ಗೆ ಸರಣಿ ಶ್ರೇಷ್ಠ ಪ್ರಶಸ್ತಿ ಕೊಡದೇ ಇರುವುದು ನನಗೆ ಅಚ್ಚರಿಯಾಗಿದೆ ಎಂದು ಕಿಡಿ ಕಾರಿದ್ದಾರೆ. ಶ್ರಾದ್ಧೂಲ್ ನಿನ್ನೆಯ ಪಂದ್ಯದಲ್ಲಿ ಇಂಗ್ಲೆಂಡ್ ನ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದ್ದಲ್ಲದೆ, ಬ್ಯಾಟಿಂಗ್ ನಲ್ಲೂ 21 ಎಸೆತಗಳಲ್ಲಿ 30 ರನ್ ಗಳಿಸಿ ಭಾರತದ ಮೊತ್ತ 300 ರ ಗಡಿ ದಾಟಲು ಕಾರಣರಾಗಿದ್ದರು. ಗೆದ್ದ ತಂಡದ ಸಾಧಕರನ್ನು ಕಡೆಗಣಿಸಿ ಸೋತ ತಂಡಕ್ಕೆ ಸನ್ಮಾನ ಮಾಡಿರುವುದು ಕೊಹ್ಲಿ ಮಾತ್ರವಲ್ಲದೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.