ಬೆಂಗಳೂರು: ಐಪಿಎಲ್ 2025 ರಲ್ಲಿ ಕೆಎಲ್ ರಾಹುಲ್ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳಿವೆ. ಕೆಎಲ್ ರಾಹುಲ್ ರನ್ನು ಆರ್ ಸಿಬಿಗೆ ಕರೆಸಲು ಸ್ವತಃ ವಿರಾಟ್ ಕೊಹ್ಲಿಯೇ ರಂಗಕ್ಕಿಳಿದಿದ್ದಾರಂತೆ.
ಈ ಮೊದಲು ಕೆಎಲ್ ರಾಹುಲ್ ರನ್ನು ಆರ್ ಸಿಬಿಗೆ ಕರೆಸಿಕೊಳ್ಳಲು ಆಗ ನಾಯಕರಾಗಿದ್ದ ಕೊಹ್ಲಿಯೇ ಕಾರಣರಾಗಿದ್ದರು. ಕೊಹ್ಲಿಯ ಹೇಳಿದ ಮೇಲೆಯೇ ರಾಹುಲ್ ಅಂದು ಅಗ್ರಿಮೆಂಟ್ ಗೆ ಸಹಿ ಹಾಕಿದ್ದರಂತೆ. ಇದೀಗ ಮತ್ತೆ ಕೆಎಲ್ ರಾಹುಲ್ ರನ್ನು ತಂಡದ ನಾಯಕರಾಗಿ ಕರೆತರಲು ಕೊಹ್ಲಿಯೇ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಇದುವರೆಗೂ ಆರ್ ಸಿಬಿ ಕಪ್ ಗೆಲ್ಲಲು ಸಾಧ್ಯವಾಗಲೇ ಇಲ್ಲ. ತಾವು ನಿವೃತ್ತಿಯಾಗುವ ಮುನ್ನ ಆರ್ ಸಿಬಿ ಚಾಂಪಿಯನ್ ಆಗಬೇಕು ಎಂಬುದು ಕೊಹ್ಲಿ ಕನಸು. ಈ ಬಾರಿ ಫಾ ಡು ಪ್ಲೆಸಿಸ್ ರನ್ನು ತಂಡದ ನಾಯಕತ್ವದಿಂದ ಕಿತ್ತು ಹಾಕಲಾಗುತ್ತದೆ. ಅವರ ಸ್ಥಾನಕ್ಕೆ ಮತ್ತೊಬ್ಬ ಪ್ರಬಲ ನಾಯಕನನ್ನು ಕರೆತರಲು ಯೋಜನೆ ರೂಪಿಸಲಾಗಿದೆ.
ಕೆಎಲ್ ರಾಹುಲ್ ಗೆ ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕರಾಗಿ ಕಹಿ ಅನುಭವಗಳಾಗಿವೆ. ಹೀಗಾಗಿ ಅವರು ಈ ಬಾರಿ ಲಕ್ನೋ ತೊರೆದು ಆರ್ ಸಿಬಿ ಸೇರಲಿದ್ದಾರೆ ಎಂಬ ಮಾತುಗಳಿವೆ. ಇದರ ನಡುವೆ ಸ್ವತಃ ಕೊಹ್ಲಿಯೇ ರಾಹುಲ್ ರನ್ನು ನಾಯಕರಾಗಿ ಮಾಡೋಣ ಎಂದು ಆರ್ ಸಿಬಿ ಮಾಲಿಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.