ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ದೇಶೀಯ ಕ್ರಿಕೆಟ್ ಟೂರ್ನಿ ಆಡದೇ ಎಷ್ಟೋ ಸಮಯವಾಗಿದೆ. ಇದೀಗ ದುಲೀಪ್ ಟ್ರೋಫಿ ಟೂರ್ನಿ ನಡೆಯಲಿದ್ದು, ರೋಹಿತ್, ಕೊಹ್ಲಿ, ಬುಮ್ರಾಗೆ ಈ ಟೂರ್ನಿಯಿಂದ ವಿನಾಯ್ತಿ ಸಿಗಲಿದೆ.
ಇತ್ತೀಚೆಗಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಹೇಳಿಕೊಳ್ಳುವ ಫಾರ್ಮ್ ನಲ್ಲಿಲ್ಲ. ರೋಹಿತ್ ಶರ್ಮಾ ಕೂಡಾ ಸುದೀರ್ಘ ಮಾದರಿಯ ಆಟದಲ್ಲಿ ದೊಡ್ಡ ಮೊತ್ತ ಗಳಿಸಿದ್ದು ಅಪರೂಪ ಎನ್ನುವಂತಾಗಿದೆ. ಸದ್ಯದಲ್ಲೇ ಚಾಂಪಿಯನ್ಸ್ ಟ್ರೋಫಿ, ಮಹತ್ವದ ಟೆಸ್ಟ್ ಸರಣಿಗಳು ಭಾರತ ಮುಂದಿದ್ದು ಈ ಸರಣಿಗಳಿಗೆ ತಯಾರಾಬೇಕಿದೆ.
ಆದರೆ ಈ ಮೂವರು ಹಿರಿಯ ಆಟಗಾರರಿಗೆ ಮತ್ತೆ ದೇಶೀಯ ಕ್ರಿಕೆಟ್ ನಿಂದ ವಿನಾಯ್ತಿ ನೀಡಲಾಗಿದೆ. ಸೆಪ್ಟೆಂಬರ್ 5 ರಿಂದ ದುಲೀಪ್ ಟ್ರೋಫಿ ಟೂರ್ನಿ ಆರಂಭವಾಗಲಿದ್ದು, ಭಾರತದ ಮೂವರು ದಿಗ್ಗಜ ಆಟಗಾರರು ಆಡಬಹುದು ಎಂದು ಈ ಮೊದಲು ಊಹಾಪೋಹಗಳಿದ್ದವು. ಆದರೆ ಅದೆಲ್ಲಾ ಸುಳ್ಳಾಗಿದೆ.
ಈ ಮೂವರನ್ನು ಹೊರತುಪಡಿಸಿ ಕೆಎಲ್ ರಾಹುಲ್, ಶುಬ್ಮನ್ ಗಿಲ್, ರಿಷಬ್ ಪಂತ್ ರಂತಹ ಸ್ಟಾರ್ ಆಟಗಾರರು ದೇಶೀಯ ಟೂರ್ನಿಯಲ್ಲಿ ಆಡಲಿದ್ದಾರೆ. ಅದರಲ್ಲೂ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಹವಣಿಸುತ್ತಿರುವ ರಿಷಬ್ ಪಂತ್, ಸರ್ಫರಾಜ್ ಖಾನ್, ಶುಬ್ಮನ್ ಗಿಲ್ ಮುಂತಾದ ಆಟಗಾರರಿಗೆ ಈ ದೇಶೀಯ ಟೂರ್ನಿ ಸಾಮರ್ಥ್ಯ ಸಾಬೀತುಪಡಿಸಲು ವೇದಿಕೆಯಂತಾಗಲಿದೆ.