24 ವರ್ಷಗಳ ಬಳಿಕ ತವರಿನಲ್ಲಿ ವೈಟ್‌ವಾಷ್‌: ನಂಬರ್‌ 1 ಸ್ಥಾನದಿಂದ ಕೆಳಗಿದ ರೋಹಿತ್‌ ಪಡೆ

Sampriya

ಭಾನುವಾರ, 3 ನವೆಂಬರ್ 2024 (15:13 IST)
Photo Courtesy X
ಮುಂಬೈ: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲೂ ಪರಾಭವಗೊಂಡಿದೆ. ಸರಣಿಯನ್ನು ಹೀನಾಯವಾಗಿ ಸೋತ ಬೆನ್ನಲ್ಲೇ ಭಾರತ ತಂಡವು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ.

12 ಪಂದ್ಯಗಳಲ್ಲಿ 62.50 ಪಿಸಿಟಿ ಪಡೆದಿರುವ ಆಸ್ಟ್ರೇಲಿಯಾ ತಂಡ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದು, 14 ಪಂದ್ಯಗಳಲ್ಲಿ 58.33 ಪಿಸಿಟಿ ಪಡೆದಿರುವ ಟೀಂ ಇಂಡಿಯಾ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನೂ 3, 4 ಮತ್ತು 5ನೇ ಸ್ಥಾನಗಳಲ್ಲಿ ಕ್ರಮವಾಗಿ ಶ್ರೀಲಂಕಾ, ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದುಕೊಂಡಿವೆ.  

ನ್ಯೂಜಿಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ 24 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅಪಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿದೆ. 2000ರಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್‌ ಆಗಿತ್ತು.  

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್‌ ಭಾರತದ ವಿರುದ್ಧ 26 ರನ್‌ಗಳ ಜಯ ಸಾಧಿಸಿ, ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ. ಈ ಮೂಲಕ ಭಾರತದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವನ್ನು ವೈಟ್‌ವಾಶ್‌ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

147 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ನಾಯಕ ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾಗಿ ಪೆವಿಲಿಯನ್‌ ಪರೇಡ್‌ ನಡೆಸಿದರು. ರಿಷಭ್‌ ಪಂತ್‌ (64) ಏಕಾಂಗಿ ಹೋರಾಟ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿದ್ದು ತಂಡಕ್ಕೆ ಭಾರಿ ಆಘಾತ ನೀಡಿತು.

ಕಿವೀಸ್‌ನ ಎಡಗೈ ಸ್ಪಿನ್ನರ್‌ ಆಜಾಜ್‌ ಪಟೇಲ್‌ 14.1 ಓವರ್‌ಗಳಲ್ಲಿ 57 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಪಡೆದು ಮಿಂಚಿದರು. ಇದರೊಂದಿಗೆ ಗ್ಲೆನ್‌ ಫಿಲಿಪ್ಸ್‌ 3 ವಿಕೆಟ್‌ ಹಾಗೂ ಮ್ಯಾಟ್‌ ಹೆನ್ರಿ 1 ವಿಕೆಟ್‌ ಕಿತ್ತರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ