ಸೋಲಿನ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಸೌಲಭ್ಯಕ್ಕೆ ಕತ್ತರಿ ಹಾಕಿದ ಗೌತಮ್ ಗಂಭೀರ್

Krishnaveni K

ಸೋಮವಾರ, 28 ಅಕ್ಟೋಬರ್ 2024 (09:17 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಕೆಲವು ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಇದುವರೆಗಿದ್ದ ಈ ಒಂದು ಸೌಲಭ್ಯಕ್ಕೆ ಕತ್ತರಿ ಬಿದ್ದಿದೆ.

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಅಭಿಮಾನಿಗಳು, ಮಾಜಿ ಕ್ರಿಕೆಟಿಗರಿಂದ ಭಾರೀ ಟೀಕೆ ವ್ಯಕ್ತವಾಗಿದೆ. ಟೀಂ ಇಂಡಿಯಾ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡಾ ದೇಶೀಯ ಕ್ರಿಕೆಟ್ ಆಡಬೇಕು ಇಲ್ಲವೇ ನಿವೃತ್ತಿಯಾಗಬೇಕು ಎಂಬ ಕೂಗು ಕೇಳಿಬಂದಿದೆ.

ಇದರ ಬೆನ್ನಲ್ಲೇ ಕೋಚ್ ಗೌತಮ್ ಗಂಭೀರ್ ಕೆಲವು ಕಟ್ಟುನಿಟ್ಟು ಮಾಡಿದ್ದಾರೆ. ಇದುವರೆಗೆ ಹಿರಿಯ ಅಟಗಾರರ ಕೊಹ್ಲಿ, ರೋಹಿತ್, ಜಸ್ಪ್ರೀತ್ ಬುಮ್ರಾರಂತಹ ಹಿರಿಯ ಆಟಗಾರರಿಗೆ ಕಡ್ಡಾಯವಾಗಿ ಎಲ್ಲಾ ಟ್ರೈನಿಂಗ್ ಸೆಷನ್ ಗೆ ಹಾಜರಾಗಬೇಕು ಎಂದೇನಿರಲಿಲ್ಲ. ಆದರೆ ಇದೀಗ ಗಂಭೀರ್ ಈ ಸೌಲಭ್ಯಕ್ಕೆ ಕತ್ತರಿ ಹಾಕಿದ್ದಾರೆ. ಇನ್ನು ಮುಂದೆ ಹಿರಿಯ-ಕಿರಿಯ ಎಂಬ ಬೇಧವಿಲ್ಲದೇ ಎಲ್ಲಾ ಆಟಗಾರರೂ ಕಡ್ಡಾಯವಾಗಿ ಎಲ್ಲಾ ಟ್ರೈನಿಂಗ್ ಸೆಷನ್ ಗೆ ಹಾಜರಾಗಬೇಕು ಎಂದು ನಿಯಮ ಮಾಡಿದ್ದಾರೆ.

ಮುಂದಿನ ಟೆಸ್ಟ್ ಪಂದ್ಯ ನವಂಬರ್ 1 ರಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಇದಕ್ಕೆ ಎರಡು ದಿನಗಳ ಮೊದಲು ಅಂದರೆ ಅಕ್ಟೋಬರ್ 30 ರಿಂದ 31 ರವರೆಗೆ ಟೀಂ ಇಂಡಿಯಾ ತರಬೇತಿ ನಡೆಸಲಿದೆ. ಈ ಎರಡೂ ದಿನಗಳೂ ಎಲ್ಲಾ ಆಟಗಾರರೂ ಕಡ್ಡಾಯವಾಗಿ ಹಾಜರಿರಬೇಕು ಎಂದು ಗಂಭೀರ್ ಫರ್ಮಾನ್ ಹೊರಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ