ಮೆಲ್ಬೊರ್ನ್: ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಖಾಯಂ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ಹೊಸ ಆರಂಭಿಕರನ್ನು ಕಂಡುಕೊಳ್ಳಬೇಕಿದೆ. ಈ ನಡುವೆ ಇಬ್ಬರ ಹೆಸರು ಚಾಲ್ತಿಯಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಆರಂಭಿಕ ಸ್ಥಾನ ತುಂಬಲು ಅಭಿಮನ್ಯು ಈಶ್ವರ್ ಮತ್ತು ಕೆಎಲ್ ರಾಹುಲ್ ನಡುವೆ ಪೈಪೋಟಿಯಿದೆ. ಯಶಸ್ವಿ ಜೈಸ್ವಾಲ್ ಜೊತೆಗೆ ಇ ಇಬ್ಬರಲ್ಲಿ ಒಬ್ಬರು ಆರಂಭಿಕರಾಗುವುದು ಬಹುತೇಕ ಖಚಿತವಾಗಿದೆ.
ಆದರೆ ಕೆಎಲ್ ರಾಹುಲ್ ಸದ್ಯಕ್ಕೆ ಫಾರ್ಮ್ ಗೆ ಬಂದಿಲ್ಲ. ಇದೇ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಹೀಗಾಗಿ ಏಕ ಏಕಿ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಲು ಸಾಧ್ಯವಿಲ್ಲ . ಅದೇ ಕಾರಣಕ್ಕೆ ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಲಾಗಿದೆ. ಹಾಗಿದ್ದರೂ ಅಲ್ಲಿಯೂ ಅವರು ವಿಫಲರಾಗಿದ್ದಾರೆ.
ಇನ್ನು, ಅಭಿಮನ್ಯು ಈಶ್ವರ್ ವಿಷಯಕ್ಕೆ ಬಂದರೆ ರಾಹುಲ್ ರಷ್ಟು ಅವರು ಅನುಭವಿ ಅಲ್ಲ. ರಾಹುಲ್ ಗೆ ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಅನುಭವವಿದೆ. ಹೀಗಾಗಿ ಸದ್ಯಕ್ಕೆ ಫಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗಿರುವ ಕೆಎಲ್ ರಾಹುಲ್ ಗೆ ತಂಡದಲ್ಲಿ ಸ್ಥಾನ ಮರಳಿ ಪಡೆಯಲು ಇದು ಉತ್ತಮ ಅವಕಾಶವಾಗಲಿದೆ.