ಮುಂಬೈ: 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಪಾಕಿಸ್ತಾನದಲ್ಲೇ ನಡೆಯುವುದಾಗಿ ಈಗಾಗಲೇ ಐಸಿಸಿ ಖಚಿತಪಡಿಸಿದೆ.
ಏಕದಿನ ವಿಶ್ವಕಪ್ ನಲ್ಲಿ ಟಾಪ್ 7 ರೊಳಗೆ ಬಂದಿದ್ದ ತಂಡಗಳು ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಅರ್ಹತೆ ಗಿಟ್ಟಿಸಿವೆ. ಈ ಟೂರ್ನಿ ಒಂದು ರೀತಿಯಲ್ಲಿ ಮಿನಿ ವಿಶ್ವಕಪ್ ಇದ್ದಂತೆ. ಈ ಬಾರಿ ಈ ಪ್ರತಿಷ್ಠಿತ ಕೂಟ ಪಾಕಿಸ್ತಾನದ ಆತಿಥ್ಯದಲ್ಲಿ ಆ ದೇಶದಲ್ಲೇ ನಡೆಯಲಿದೆ.
ಕಳೆದ ಬಾರಿ ಏಷ್ಯಾ ಕಪ್ ಟೂರ್ನಿಯೂ ಪಾಕ್ ಆತಿಥ್ಯದಲ್ಲಿ ನಡೆದಿತ್ತು. ಆದರೆ ಭಾರತದ ಒತ್ತಡಕ್ಕೆ ಮಣಿದು ಟೀಂ ಇಂಡಿಯಾ ಆಡುವ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿತ್ತು. ಆದರೆ ಚಾಂಪಿಯನ್ಸ್ ಟ್ರೋಫಿಗೆ ಪಾಕ್ ಏಕಾಂಗಿಯಾಗಿ ಆತಿಥ್ಯ ವಹಿಸುತ್ತಿದೆ. ಹೀಗಾಗಿ ಭಾರತಕ್ಕೆ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಕ್ಕೆ ಪ್ರಯಾಣಿಸಲೇಬೇಕಾದ ಒತ್ತಡವಿದೆ.
ಆದರೆ ಇದಕ್ಕೆ ಕೇಂದ್ರದಿಂದ ಒಪ್ಪಿಗೆ ಸಿಗುವುದು ಕಷ್ಟ. ಹೀಗಿರುವಾಗ ಭಾರತ ತನ್ನ ಪ್ರಭಾವ ಬಳಸಿ ತಾನು ಆಡುವ ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವಂತೆ ಮಾಡುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಇತ್ತೀಚೆಗೆ ಡೇವಿಸ್ ಕಪ್ ನಲ್ಲಿ ಭಾಗಿಯಾಗಲು ಭಾರತೀಯ ಆಟಗಾರರಿಗೆ ಪಾಕಿಸ್ತಾನಕ್ಕೆ ತೆರಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಹೀಗಾಗಿ ಕ್ರಿಕೆಟಿಗರಿಗೂ ಬದ್ಧ ಎದುರಾಳಿ ದೇಶಕ್ಕೆ ತೆರಳಲು ಅವಕಾಶ ಸಿಗಬಹುದೇನೋ ಎಂಬ ನಿರೀಕ್ಷೆಯಿದೆ.