ದುಬೈ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಇದೀಗ ಭಾರತ ಮತ್ತು ಪಾಕಿಸ್ತಾನ ನಡುವೆ ಸೂಪರ್ 4 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಶೇಕ್ ಹ್ಯಾಂಡ್ ಮಾಡುತ್ತಾ ಎನ್ನುವುದೇ ಎಲ್ಲರ ಪ್ರಶ್ನೆಯಾಗಿದೆ. ಅದಕ್ಕೆ ಇಲ್ಲಿದೆ ಉತ್ತರ.
ಲೀಗ್ ಹಂತದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದಾಗ ಗೆಲುವಿನ ಬಳಿಕ ಮತ್ತು ಮೊದಲು ಟೀಂ ಇಂಡಿಯಾ ಪಾಕ್ ಆಟಗಾರರ ಕೈ ಕುಲುಕದೇ ಪೆವಿಲಿಯನ್ ಗೆ ತೆರಳಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೇ ವಿಚಾರವನ್ನಿಟ್ಟುಕೊಂಡು ಪಾಕಿಸ್ತಾನ ಹೈಡ್ರಾಮಾವನ್ನೇ ಮಾಡಿತು.
ಯುಎಇ ವಿರುದ್ಧದ ಪಂದ್ಯಕ್ಕೆ ಮೊದಲು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ರನ್ನು ಕಿತ್ತು ಹಾಕಬೇಕೆಂದು ಹಠ ಹಿಡಿದು ಕುಳಿತಿತ್ತು. ಆದರೆ ಐಸಿಸಿ ಇದಕ್ಕೆ ಸೊಪ್ಪೇ ಹಾಕಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಪಾಕಿಸ್ತಾನ ಈಗ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ.
ಈ ನಡುವೆ ಸೂಪರ್ 4 ಹಂತದಲ್ಲಿ ಮತ್ತೊಮ್ಮೆ ಭಾರತ-ಪಾಕ್ ಮುಖಾಮುಖಿಯಾಗಲಿದೆ. ಕಳೆದ ಪಂದ್ಯದಲ್ಲಿ ವಿವಾದದ ಬಳಿಕ ಟೀಂ ಇಂಡಿಯಾ ಈ ಬಾರಿ ಪಾಕಿಸ್ತಾನಿಯರ ಕೈಕುಲುಕಲಿದೆಯೇ ಎಂಬ ಅನುಮಾನ ಎಲ್ಲರಲ್ಲಿದೆ.
ಮೂಲಗಳ ಪ್ರಕಾರ ಈ ಪಂದ್ಯದಲ್ಲೂ ಭಾರತೀಯ ಆಟಗಾರರು ಶೇಕ್ ಹ್ಯಾಂಡ್ ಮಾಡುತ್ತಿಲ್ಲ. ಇದನ್ನು ಈಗಾಗಲೇ ಪಾಕಿಸ್ತಾನಕ್ಕೂ ಮನದಟ್ಟು ಮಾಡಲಾಗಿದೆ. ಯಾವುದೇ ಕಾರಣಕ್ಕೂ ಸೂರ್ಯಕುಮಾರ್ ಯಾದವ್ ಪಡೆ ಶೇಕ್ ಹ್ಯಾಂಡ್ ಮಾಡಲ್ಲ ಎಂದು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.