ಬೆಂಗಳೂರು: ಡಬ್ಲ್ಲುಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸಿಡಿದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಗರು 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಕಲೆ ಹಾಕಿದ್ದಾರೆ.
ಟಾಸ್ ಗೆದ್ದ ಆರ್ ಸಿಬಿ ಇಂದು ಮತ್ತೊಮ್ಮೆ ಫೀಲ್ಡಿಂಗ್ ಆಯ್ದುಕೊಂಡಿತು. ಇದುವರೆಗೆ ಚಿನ್ನಸ್ವಾಮಿ ಅಂಗಣದಲ್ಲಿ ಮೊದಲು ಫೀಲ್ಡಿಂಗ್ ಮಾಡಿದ ತಂಡವೇ ಹೆಚ್ಚು ಮೇಲುಗೈ ಸಾಧಿಸಿತ್ತು. ಬಹುಶಃ ಅದೇ ಲೆಕ್ಕಾಚಾರದಲ್ಲಿ ಸ್ಮೃತಿ ಮಂಧಾನಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಆದರೆ ಇಂದು ಯಾಕೋ ಆರ್ ಸಿಬಿ ಬೌಲಿಂಗ್ ಡೆಲ್ಲಿ ಡ್ಯಾಶರ್ ಗಳ ಮುಂದೆ ವರ್ಕೌಟ್ ಆಗಲಿಲ್ಲ. ನಾಯಕಿ ಮೆಗ್ ಲ್ಯಾನಿಂಗ್ ರನ್ನು 11 ರನ್ ಗೇ ಪೆವಿಲಿಯನ್ ಗಟ್ಟಿದರೂ ಆರ್ ಸಿಬಿಗೆ ಕಾಡಿದ್ದು ಶಫಾಲಿ ವರ್ಮ. ಕೇವಲ 31 ಎಸೆತಗಳಿಂದ 4 ಸಿಕ್ಸರ್ ಸಹಿತ 50 ರನ್ ಚಚ್ಚಿದ ಅವರು ಆರ್ ಸಿಬಿ ಬೌಲರ್ ಗಳ ಬೆವರಿಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಅಲೈಸ್ ಕಾಪ್ಸಿ 46 ರನ್ ಸಿಡಿಸಿದರು. ಜೆಮಿಮಾ ರೊಡ್ರಿಗಸ್ ಶೂನ್ಯಕ್ಕೆ ಔಟಾಗಿದ್ದು ಆರ್ ಸಿಬಿ ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಆದರೆ ಕೊನೆಯಲ್ಲಿ ವಿಜೃಂಭಿಸಿದ ಮರೈಝನೆ ಕಪ್ 16 ಎಸೆತಗಳಿಂದ 32 ರನ್ ಮತ್ತು ಜೆಸ್ ಜೊನಾಸನ್ ಔಟಾಗದೇ 36 ರನ್ ಚಚ್ಚಿ ತಂಡದ ಮೊತ್ತ ಉಬ್ಬಲು ಕಾರಣರಾದರು. ಆರ್ ಸಿಬಿ ಪರ ಇಂದು 7 ಬೌಲರ್ ಗಳು ಬೌಲಿಂಗ್ ಮಾಡಿದರು. ಈ ಪೈಕಿ ಸೋಫಿ ಡಿವೈನ್, ನಡೈನ್ ಕ್ಲರ್ಕ್ ತಲಾ 2 ವಿಕೆಟ್ ಕಬಳಿಸಿದರು.ಉಳಿದೊಂದು ವಿಕೆಟ್ ಕನ್ನಡತಿ ಶ್ರೇಯಾಂಕ ಪಾಟೀಲ್ ಪಾಲಾಯಿತು. ಆದರೆ ಅವರು 3 ಓವರ್ ಗಳಿಗೆ 40 ರನ್ ನೀಡಿ ದುಬಾರಿಯಾದರು. ಇದೀಗ ಆರ್ ಸಿಬಿ ಗೆಲ್ಲಲು 20 ಓವರ್ ಗಳಲ್ಲಿ 195 ರನ್ ಗಳಿಸಬೇಕಿದೆ.