ಡಬ್ಲ್ಯುಪಿಎಲ್ 2024: ಎಲ್ಲಿಸ್ ಪೆರ್ರಿ ಸಿಕ್ಸರ್ ಗೆ ಕಾರಿನ ಗಾಜು ಪುಡಿ ಪುಡಿ

Krishnaveni K

ಮಂಗಳವಾರ, 5 ಮಾರ್ಚ್ 2024 (09:00 IST)
Photo Courtesy: Twitter
ಬೆಂಗಳೂರು: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೂಲದ ಆರ್ ಸಿಬಿ ಆಟಗಾರ್ತಿ ಎಲ್ಲಿಸ್ ಪೆರ್ರಿ ನಿನ್ನೆ ಭರ್ಜರಿ ಬ್ಯಾಟಿಂಗ್ ನಡೆಸಿದರು.

ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಎಲ್ಲಿಸ್ ಕೇವಲ 37 ಎಸೆತ ಎದುರಿಸಿ ಅಜೇಯ 58 ರನ್ ಸಿಡಿಸಿದರು. ಈ ಇನಿಂಗ್ಸ್ ನಲ್ಲಿ 4 ಭರ್ಜರಿ ಸಿಕ್ಸರ್ ಗಳೂ ಸೇರಿತ್ತು. ರಾಜೇಶ್ವರಿ ಗಾಯಕ್ ವಾಡ್ ಎಸೆತದಲ್ಲಂತೂ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಗಳ ಮೂಲಕ ನೆರೆದಿದ್ದ ಸಾವಿರಾರು ಆರ್ ಸಿಬಿ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಸ್ಮೃತಿ ಮಂಧಾನ ಅಬ್ಬರದ ಬಳಿಕ ಎಲ್ಲಿಸ್ ಇನಿಂಗ್ಸ್ ಜವಾಬ್ಧಾರಿ ಹೊತ್ತಿದ್ದರು. ಅವರ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ಆರ್ ಸಿಬಿ 198 ರನ್ ಗಳಿಸಲು ಸಾಧ‍್ಯವಾಯಿತು. ಈ ಅಬ್ಬರದ ಬ್ಯಾಟಿಂಗ್ ಹೇಗಿತ್ತೆಂದರೆ ಮೈದಾನದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಕಾರಿನ ಗಾಜು ಪುಡಿ ಪುಡಿಯಾಯಿತು.

ತಮ್ಮ ಹೊಡೆತಕ್ಕೆ ಕಾರಿನ ಗಾಜು ಪುಡಿ ಪುಡಿಯಾಗುತ್ತಿದ್ದಂತೇ ಎಲ್ಲಿಸ್ ಕೂಡಾ ತಲೆಮೇಲೆ ಕೈ ಇಟ್ಟು ಆಘಾತ ವ್ಯಕ್ತಪಡಿಸಿದರು. ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿದ ಅವರು ಆ ಕಾರಿನ ಗಾಜು ಪುಡಿ ಪುಡಿಯಾದಾಗ ನನಗೆ ಸ್ವಲ್ಪ ಚಿಂತೆಯಾಯಿತು. ಅದನ್ನು ಸರಿಪಡಿಸಲು ನನಗೆ ಇಲ್ಲಿ ವಿಮೆ ಇದೆಯಾ ಎನ್ನುವುದೂ ಗೊತ್ತಿಲ್ಲ ಎಂದಿದ್ದಾರೆ.

ಇದಲ್ಲದೆ, ನಿನ್ನೆಯ ದಿನ ವೀಕೆಂಡ್ ಅಲ್ಲದೇ ಇದ್ದರೂ ಆರ್ ಸಿಬಿ ಪಂದ್ಯವಾಗಿದ್ದರಿಂದ ಮೈದಾನ ಭರ್ತಿಯಾಗಿತ್ತು. ಅದರಲ್ಲೂ ಆರ್ ಸಿಬಿ ಪ್ರೇಕ್ಷಕರು ಎಲ್ಲಿಸ್ ಪೆರಿ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡಲು ಬರುವಾಗಲೆಲ್ಲಾ ಅವರ ಹೆಸರೆತ್ತಿ ಕೂಗಿ ಚಿಯರ್ ಮಾಡುತ್ತಿದ್ದರು. ಇಲ್ಲಿನ ಅಭಿಮಾನಿಗಳ ಬಗ್ಗೆ ಮಾತನಾಡಿರುವ ಎಲ್ಲಿಸ್ ಪೆರಿ ಇಂತಹ ಅಭಿಮಾನಿಗಳನ್ನು ನಾನು ಎಲ್ಲೂ ನೋಡಿರಲಿಲ್ಲ. ನನಗೆ ಇದು ಹೊಸ ಅನುಭವ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ