ಬೆಂಗಳೂರು: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಬಲ ಎದುರಾಳಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆಡಲಿದೆ. ಹಾಲಿ ಚಾಂಪಿಯನ್ ಮುಂಬೈ ಆರ್ ಸಿಬಿಗೆ ಕಠಿಣ ಎದುರಾಳಿಯಾಗಲಿದೆ.
ಮೊದಲ ಎರಡು ಪಂದ್ಯಗಳನ್ನು ಸತತವಾಗಿ ಗೆದ್ದಿದ್ದ ಆರ್ ಸಿಬಿ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಸೋಲು ಕಂಡಿತ್ತು. ಮೊದಲ ಎರಡು ಪಂದ್ಯಗಳಲ್ಲಿ ಆರ್ ಸಿಬಿ ಬೌಲಿಂಗ್ ಉತ್ತಮವಾಗಿತ್ತು. ಕಳೆದ ಪಂದ್ಯದಲ್ಲಿ ಡೆಲ್ಲಿ ಪ್ರಬಲ ಬ್ಯಾಟಿಗರ ಎದುರು ಆರ್ ಸಿಬಿ ಬೌಲಿಂಗ್ ಕಳೆಗುಂದಿತ್ತು. ಇನ್ನು, ಬ್ಯಾಟಿಂಗ್ ನಲ್ಲಿ ಅಗ್ರ ಕ್ರಮಾಂಕ ಹಾಕಿಕೊಟ್ಟ ಬುನಾದಿಯಲ್ಲಿ ಕೆಳ ಕ್ರಮಾಂಕದ ಬ್ಯಾಟಿಗರು ಯಶಸ್ಸಿನ ಮನೆ ಕಟ್ಟುವಲ್ಲಿ ವಿಫಲರಾಗಿದ್ದರು.
ಮಹಿಳಾ ಪ್ರೀಮಿಯರ್ ಲೀಗ್ ನ ಅತ್ಯಂತ ಪ್ರಬಲ ತಂಡವೆಂದರೆ ಮುಂಬೈ ಇಂಡಿಯನ್ಸ್. ಕಳೆದ ಪಂದ್ಯದಲ್ಲಿ ನಾಯಕಿ ಹರ್ಮನ್ ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ಸಿವರ್ ಬ್ರಂಟ್ ತಂಡ ಮುನ್ನಡೆಸಿದ್ದರು. ಕಳೆದ ಪಂದ್ಯದಲ್ಲಿ ಯುಪಿ ವಿರುದ್ಧ ಮುಂಬೈ ಅಚ್ಚರಿಯ ಸೋಲು ಅನುಭವಿಸಿತ್ತು. ಆದರೆ ಈ ಪಂದ್ಯಕ್ಕೆ ಹರ್ಮನ್ ವಾಪಸಾಗುವ ನಿರೀಕ್ಷೆಯಿದ್ದು, ಆರ್ ಸಿಬಿ ವಿರುದ್ಧ ಮೈಲುಗೈ ಸಾಧಿಸುವ ವಿಶ್ವಾಸದಲ್ಲಿದೆ.
ಇದುವರೆಗೆ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಒಮ್ಮೆಯೂ ಮುಂಬೈ ವಿರುದ್ಧ ಗೆದ್ದಿಲ್ಲ. ಆದರೆ ಇಂದು ತವರಿನ ಪ್ರೇಕ್ಷಕರ ಬೆಂಬಲವೂ ಇರುವುದರಿಂದ ಕಳೆದ ಪಂದ್ಯಗಳ ಹುಳುಕುಗಳನ್ನು ಸರಿಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ಆರ್ ಸಿಬಿ ಪಂದ್ಯವೆಂದರೆ ಬೆಂಗಳೂರು ಮೈದಾನ ಭರ್ತಿಯಾಗುತ್ತದೆ. ಇಂದು ಅಷ್ಟೇ ಜನಪ್ರಿಯವಾಗಿರುವ ಮುಂಬೈ ಎದುರಾಳಿಯಾಗಿರುವುದರಿಂದ ವೀಕೆಂಡ್ ಪಂದ್ಯಕ್ಕೆ ಮುಂಬೈ ಮೈದಾನ ಭರ್ತಿಯಾಗುವ ನಿರೀಕ್ಷೆಯಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.