ಡಬ್ಲ್ಯುಪಿಎಲ್ 2024: ಯುಪಿ ವಾರಿಯರ್ಸ್ ವಿರುದ್ಧ ಗೆದ್ದ ಆರ್ ಸಿಬಿಗೆ ಅಂಕಪಟ್ಟಿಯಲ್ಲಿ ಬಡ್ತಿ

Krishnaveni K

ಮಂಗಳವಾರ, 5 ಮಾರ್ಚ್ 2024 (08:40 IST)
ಬೆಂಗಳೂರು: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಯುಪಿ ವಾರಿಯರ್ಸ್ ವಿರುದ್ಧ 23 ರನ್ ಗಳ ಗೆಲುವು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಅಂಕಪಟ್ಟಿಯಲ್ಲೂ ಬಡ್ತಿ ಪಡೆದಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ಸ್ಮೃತಿ ಮಂಧಾನ ಅಬ್ಬರದ 80 ಮತ್ತು ಎಲ್ಸಿ ಪೆರಿ ಅವರ 58 ರನ್ ಗಳ ಇನಿಂಗ್ಸ್ ನಿಂದಾಗಿ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಈ ಬೃಹತ್ ಮೊತ್ತ ಬೆನ್ನತ್ತಿದ ಯುಪಿ ವಾರಿಯರ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು.

ಕಳೆದ ಎರಡು ಪಂದ್ಯಗಳನ್ನು ಸತತವಾಗಿ ಸೋತಿದ್ದ ಆರ್ ಸಿಬಿಗೆ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ತಕ್ಕ ಸಮಯದಲ್ಲಿ ಅನುಭವಿಗಳಾದ ಸ್ಮೃತಿ, ಎಲ್ಸಿ ಪೆರಿ ಬ್ಯಾಟಿಂಗ್ ನಲ್ಲಿ ತಂಡಕ್ಕೆ ಆಸರೆಯಾದರೆ ಬೌಲಿಂಗ್ ನಲ್ಲಿ ಸೋಫಿ ಡಿವೈನ್, ಸೋಫಿ ಮೊಲಿನಕ್ಸ್, ಜಾರ್ಜಿಯಾ ವಾರೆಹಾಂ, ಆಶಾ ಶೋಭನಾ ತಲಾ 2 ವಿಕೆಟ್ ಕಬಳಿಸಿ ತಂಡಕ್ಕೆ ಅರ್ಹ ಜಯ ಕೊಡಿಸಿದರು. ಇದರೊಂದಿಗೆ ಆರ್ ಸಿಬಿ ಮೂರನೇ ಸೋಲು ತಪ್ಪಿಸಿಕೊಂಡು ಸಮಾಧಾನದ ನಿಟ್ಟುಸಿರು ಬಿಟ್ಟಿತು.

ಈ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಆರ್ ಸಿಬಿಗೆ ಇದು ಮೂರನೇ ಗೆಲುವಾಗಿದೆ. ಆಡಿದ ಐದು ಪಂದ್ಯಗಳ ಪೈಕಿ ಎರಡು ಸೋಲು 3 ಗೆಲುವು ಕಂಡಿರುವ ಸ್ಮೃತಿ ಮಂಧಾನ ಪಡೆ ಇದೀಗ ಒಟ್ಟು 6 ಅಂಕ ಪಡೆದಿದ್ದು ಮೂರನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ