ಬೆಂಗಳೂರು: ಡಬ್ಲ್ಯುಪಿಎಲ್ ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮಹತ್ವದ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿಸಲ್ಪಟ್ಟ ಆರ್ ಸಿಬಿಗೆ ಮತ್ತೆ ಬ್ಯಾಟಿಂಗ್ ಕೈ ಕೊಟ್ಟಿತು. ಅಗ್ರ ಕ್ರಮಾಂಕದ ಬ್ಯಾಟಿಗರು ಆಘಾತ ನೀಡಿದರು. ಒಂದು ಹಂತದಲ್ಲಿ 71 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಚೇತರಿಕೆ ನೀಡಿದ್ದು ಅನುಭವಿ ಆಟಗಾರ್ತಿ ಎಲ್ಸಿ ಪೆರಿ. 38 ಎಸೆತ ಎದುರಿಸಿದ ಎಲ್ಸಿ 44 ರನ್ ಗಳಿಸಿ ಕೊನೆಯವರೆಗೂ ಅಜೇಯರಾಗುಳಿದರು. ಜಾರ್ಜಿಯಾ ವಾರೆಹಾಮ್ ಜೊತೆ 50 ರನ್ ಗಳ ಜೊತೆಯಾಟವಾಡಿದರು.
ಆದರೆ 27 ರನ್ ಗಳಿಸಿದ್ದ ಜಾರ್ಜಿಯಾ ಒಂದು ಓವರ್ ಬಾಕಿಯಿದ್ದಾಗ ಔಟಾದರು. ಟಿ20 ಮಾದರಿಯಲ್ಲಿ ಅದರಲ್ಲೂ ಬ್ಯಾಟಿಂಗ್ ಗೆ ಸಹಕಾರಿಯಾಗುವ ಚಿನ್ನಸ್ವಾಮಿ ಮೈದಾನದಲ್ಲಿ ಈ ಮೊತ್ತ ತೀರಾ ಕಡಿಮೆಯಾಯಿತು. ಇದಕ್ಕೆ ಆರ್ ಸಿಬಿ ತನ್ನ ಅಗ್ರ ಕ್ರಮಾಂಕವನ್ನು ಹಳಿದುಕೊಳ್ಳಬೇಕು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಸ್ಮೃತಿ ಮಂಧಾನ ಮತ್ತೆ ವಿಫಲರಾದರು.
ಮುಂಬೈ ಪರ ಇಂದೂ ಖಾಯಂ ನಾಯಕಿ ಹರ್ಮನ್ ಪ್ರೀತ್ ಕೌರ್ ಗಾಯದ ಕಾರಣದಿಂದ ಕಣಕ್ಕಿಳಿಯಲಿಲ್ಲ. ಅವರ ಬದಲಿಗೆ ನಾಯಕಿಯಾಗಿ ತಂಡ ಮುನ್ನಡೆಸಿದ ಸಿವರ್ ಬ್ರಂಟ್ 2 ವಿಕೆಟ್ ಕಿತ್ತು ಗಮನ ಸೆಳೆದರು. ಭಾರತೀಯ ತಾರೆ ಪೂಜಾ ವಸ್ತ್ರಾಕರ್ ಕೂಡಾ 2 ವಿಕೆಟ್ ತಮ್ಮದಾಗಿಸಿಕೊಂಡರು. ಉಳಿದಂತೆ ಇಸ್ಸಿ ವಾಂಗ್, ಸಾಯಿ ಇಶಾಕೆ ತಲಾ 1 ವಿಕೆಟ್ ಕಬಳಿಸಿದರು. ಇದೀಗ ಮುಂಬೈ ಗೆಲುವಿಗೆ 132 ರನ್ ಗಳಿಸಬೇಕಿದೆ.