ದೆಹಲಿ: ಡಬ್ಲ್ಯುಪಿಎಲ್ 2024 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವಾಡಲಿದೆ. ಈ ಮೂಲಕ ಮತ್ತೆ ಗೆಲುವಿನ ಹಳಿಗೆ ಮರಳಲು ಪ್ರಯತ್ನಿಸಲಿದೆ.
ಮೊದಲ ಎರಡು ಪಂದ್ಯಗಳನ್ನು ಗೆದ್ದಿದ್ದ ಆರ್ ಸಿಬಿ ಬಳಿಕ ಎರಡು ಪಂದ್ಯ ಸೋತಿತ್ತು. ಅದಾದ ಬಳಿಕ ಬೆಂಗಳೂರಿನಲ್ಲಿ ನಡೆದ ಕೊನೆಯ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿತ್ತು. ಆದರೆ ಡೆಲ್ಲಿಗೆ ಕಾಲಿಟ್ಟ ತಕ್ಷಣ ಮೊದಲ ಪಂದ್ಯವನ್ನೇ ಸೋತು ನಿರಾಸೆ ಅನುಭವಿಸಿತ್ತು.
ಆದರೆ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನೇ ಎದುರಿಸುತ್ತಿದೆ. ಈ ಟೂರ್ನಿಯಲ್ಲಿ ಇದಕ್ಕೆ ಮೊದಲು ಡೆಲ್ಲಿ ವಿರುದ್ಧ ಆರ್ ಸಿಬಿ ಗೆದ್ದಿಲ್ಲ. ಡೆಲ್ಲಿ ತಂಡದ ವಿರುದ್ಧ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಡೆಲ್ಲಿ ಮುಂದಿದೆ. ಹೀಗಾಗಿ ಆರ್ ಸಿಬಿ ತನ್ನ ಶಕ್ತಿ ಮೀರಿ ಪ್ರಯತ್ನಿಸಬೇಕಾಗುತ್ತದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮೆಗ್ ಲ್ಯಾನಿಂಗ್, ಶಫಾಲಿ ವರ್ಮ, ಜೆಮಿಮಾ ರೊಡ್ರಿಗಸ್ ಜೊತೆಗೆ ಮರಿಝೈನ್ ಕಪ್ ಬೌಲಿಂಗ್ ನಿಂದಾಗಿ ಪ್ರಬಲವಾಗಿದೆ. ಪ್ರಬಲ ಮುಂಬೈ ವಿರುದ್ಧವೂ ಗೆದ್ದ ಖ್ಯಾತಿ ಡೆಲ್ಲಿಯದ್ದಾಗಿದೆ. ಹೀಗಾಗಿ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಇಂದಿನ ಪಂದ್ಯದಲ್ಲಿ ಡೆಲ್ಲಿಗೆ ಆರ್ ಸಿಬಿ ಯಾವ ರೀತಿ ಕಡಿವಾಣ ಹಾಕುತ್ತದೆ ಎಂದು ಕಾದು ನೋಡಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.