ಡಬ್ಲ್ಯುಪಿಎಲ್ 2024: ಗುಜರಾತ್ ಜೈಂಟ್ಸ್ ವಿರುದ್ಧ ಹೋರಾಡಿ ಸೋತ ಆರ್ ಸಿಬಿ

Krishnaveni K

ಗುರುವಾರ, 7 ಮಾರ್ಚ್ 2024 (08:20 IST)
ದೆಹಲಿ: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19 ರನ್ ಗಳ ಸೋಲು ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತ್ತು. ಗುಜರಾತ್ ಪರ ನಾಯಕಿ ಬೆತ್ ಮೂನಿ ಅಜೇಯ 85, ಲೌರಾ ವೋಲ್ವಾರ್ಡ್ತ್ 76 ರನ್ ಗಳಿಸಿದರು. ಗೆಲ್ಲಲು ಭರ್ತಿ 200 ರನ್ ಗಳ ಗುರಿ ಬೆನ್ನತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸೋತರೂ ಕೊನೆಯವರೆಗೂ ಹೋರಾಡಿತು ಎನ್ನುವುದು ಸಮಾಧಾನಕರ ಅಂಶವಾಗಿದೆ.

ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ-ಶಬ್ಬಿನೇನಿ ಮೇಘನಾ ಮೊದಲು ಎಚ್ಚರಿಕೆಯ ಆಟವಾಡಿದರು. ತೀರಾ ನಿಧಾನಗತಿಯ ಆಟವಾಡಿದ ಮೇಘನಾ 13 ಎಸೆತ ಎದುರಿಸಿ ಗಳಿಸಿದ್ದು ಕೇವಲ 4 ರನ್. ಇನ್ನೊಂದೆಡೆ ನಾಯಕಿ ಸ್ಮೃತಿ ಮಂಧಾನ 16 ಎಸೆತಗಳಿಂದ 24 ರನ್ ಗಳಿಸಿ ಔಟಾದರು. ಅನುಭವಿಗಳಾದ ಎಲ್ಲಿಸ್ ಪೆರ್ರಿ 24, ಸೋಫಿ ಡಿವೈನ್ 23 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ಬಳಿಕ ರಿಚಾ ಘೋಷ್ ಮತ್ತು ಜಾರ್ಜಿಯಾ ವಾರೆಹಾಮ್ ಗೆಲುವಿನ ಭರವಸೆ ಹುಟ್ಟಿಸಿದರು. ರಿಚಾ 21 ಎಸೆತಗಳಿಂದ 30 ರನ್ ಗಳಿಸಿದರೆ ಜಾರ್ಜಿಯಾ 22 ಎಸೆತಗಳಿಂದ 48 ರನ್ ಸಿಡಿಸಿದರು.  ಆದರೆ ಜಾರ್ಜಿಯಾ ರನೌಟ್ ಆಗುತ್ತಿದ್ದಂತೇ ಆರ್ ಸಿಬಿ ಗೆಲುವಿನ ಆಸೆ ಕ್ಷೀಣಿಸಿತು.

ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಶೇಷವೆಂದರೆ ಆರ್ ಸಿಬಿಯ ಈ ಇನಿಂಗ್ಸ್ ನಲ್ಲಿ ಒಟ್ಟು ನಾಲ್ವರು ರನೌಟ್ ಆದರು. ಉಳಿದಂತೆ ಆಶ್ಲೇ ಗಾರ್ಡನರ್ 2, ಕ್ಯಾಥರಿನ್ ಬ್ರೈಸ್, ತನುಜಾ ಕನ್ವರ್ ತಲಾ 1 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ