ಡಬ್ಲ್ಯುಪಿಎಲ್ 2024: ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿರುವ ಆರ್ ಸಿಬಿಗೆ ಇಂದು ಕಠಿಣ ಎದುರಾಳಿ

Krishnaveni K

ಗುರುವಾರ, 29 ಫೆಬ್ರವರಿ 2024 (11:59 IST)
ಬೆಂಗಳೂರು: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಬೀಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ಕಠಿಣ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ಸವಾಲಾಗಲಿದೆ.

ಮೊದಲ ಪಂದ್ಯವನ್ನು ಯುಪಿ ವಾರಿಯರ್ಸ್ ಜೊತೆ ಆಡಿದ್ದ ಆರ್ ಸಿಬಿ ಕೊನೆಯ ಕ್ಷಣದಲ್ಲಿ ರೋಚಕ ಗೆಲುವು ಕಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದ ಸ್ಮೃತಿ ಮಂಧಾನಾ ಪಡೆ ಗುಜರಾತ್ ಜೈಂಟ್ಸ್ ತಂಡವನ್ನು ಸುಲಭವಾಗಿ ಹೊಸಕಿ ಹಾಕಿತ್ತು.

ತವರಿನ ಪ್ರೇಕ್ಷಕರ ಬೆಂಬಲದ ನಡುವೆ ಆರ್ ಸಿಬಿ ತಾರೆಯರು ಸೋಲರಿಯದೇ ಮುನ್ನುಗ್ಗುತ್ತಿದ್ದಾರೆ. ಆದರೆ ಕಳೆದ ಎರಡೂ ಪಂದ್ಯಗಳಲ್ಲಿ ಆರ್ ಸಿಬಿಗೆ ದುರ್ಬಲ ಎದುರಾಳಿಗಳು ಸಿಕ್ಕಿದ್ದರು. ಆದರೆ ಇದೀಗ ಡೆಲ್ಲಿ ಪ್ರಬಲ ತಂಡವಾಗಿದ್ದು, ಈ ತಂಡದ ವಿರುದ್ಧ ಗೆದ್ದರೆ ಆರ್ ಸಿಬಿ ಮಾನಸಿಕ ಸ್ಥೈರ್ಯ ಹೆಚ್ಚಾಗಲಿದೆ.  ಕಳೆದ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಬ್ಯಾಟಿಂಗ್ ನಲ್ಲಿ ಸಿಡಿದಿದ್ದು ದೊಡ್ಡ ಚಿಂತೆ ನಿವಾರಿಸಿದೆ. ಆದರೆ ಅನುಭವಿ ಆಟಗಾರ್ತಿ ಸೋಫಿ ಡಿವೈನ್, ಎಲ್ಸಿ ಪೆರಿಯಿಂದ ಇನ್ನೂ ಖ್ಯಾತಿಗೆ ತಕ್ಕ ಆಟ ಬರಬೇಕಿದೆ.

ಅತ್ತ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಆಡಿದ ಎರಡು ಪಂದ್ಯಗಳ ಪೈಕಿ ಮುಂಬೈ ವಿರುದ್ಧ ಸೋತಿದ್ದು, ಇನ್ನೊಂದು ಪಂದ್ಯವನ್ನು ಗೆದ್ದುಕೊಂಡಿದೆ. ಡೆಲ್ಲಿ ಬ್ಯಾಟಿಂಗ್ ನಲ್ಲಿ ಬಲಾಢ್ಯ ತಂಡ. ಶಫಾಲಿ ವರ್ಮ, ಮೆಗ್ ಲ್ಯಾನಿಂಗ್, ಜೆಮಿಮಾ ರೊಡ್ರಿಗಸ್ ಎಂಬ ಮೂವರು ಸ್ಟಾರ್ ಬ್ಯಾಟಿಗರು ಡೆಲ್ಲಿಯ ಶಕ್ತಿ. ಇವರನ್ನು ಕಟ್ಟಿ ಹಾಕಿದರೆ ಅರ್ಧ ಪಂದ್ಯ ಗೆದ್ದಂತೆಯೇ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ವಿರುದ್ಧ ಆರ್ ಸಿಬಿ ಮಕಾಡೆ ಮಲಗಿತ್ತು. ಈ ಬಾರಿ ಹಾಗಾಗದು ಎಂಬ ವಿಶ್ವಾಸವಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ