ಬೆಂಗಳೂರು: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಕಳೆದ ಎರಡೂ ಪಂದ್ಯಗಳನ್ನು ಗೆದ್ದುಕೊಂಡ ಆರ್ ಸಿಬಿ ಈಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿದೆ.
ಗುಜರಾತ್ ಜೈಂಟ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ 20 ಓವರ್ ಗಳಲ್ಲಿ 107 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೊತ್ತ ಬೆನ್ನತ್ತಿದ ಆರ್ ಸಿಬಿ 12.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 110 ರನ್ ಗಳಿಸುವ ಮೂಲಕ ಗುರಿ ಮುಟ್ಟಿತು.
ವಿಶೇಷವೆಂದರೆ ನಿನ್ನೆ ಆರ್ ಸಿಬಿ ಫ್ಯಾನ್ಸ್ ಬಹುದಿನಗಳಿಂದ ಕಾಯುತ್ತಿದ್ದ ಸ್ಮೃತಿ ಮಂಧಾನಾ ಇನಿಂಗ್ಸ್ ನೋಡಲು ಸಿಕ್ಕಿತ್ತು. ಕೇವಲ 27 ಎಸೆತಗಳಲ್ಲಿ 1 ಸಿಕ್ಸರ್, 8 ಬೌಂಡರಿ ಸಹಿತ ಸ್ಮೃತಿ 43 ರನ್ ಚಚ್ಚಿದರು. ಇದರಿಂದಾಗಿ ಆರ್ ಸಿಬಿಗೆ ಭರ್ಜರಿ ಓಪನಿಂಗ್ ಸಿಕ್ಕಿತು. ಆದರೆ ಇನ್ನೊಬ್ಬ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಕೇವಲ 6 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ನಂತರ ಬಂದ ಮೇಘನಾ 36 ರನ್ ಸಿಡಿಸಿ ಕೊನೆಯವರೆಗೂ ಅಜೇಯರಾಗುಳಿದರು. ಸ್ಮೃತಿ ಔಟಾದ ಬಳಿಕ ಕ್ರೀಸ್ ಗೆ ಬಂದ ಎಲ್ಸಿ ಪೆರಿ 14 ಎಸೆತಗಳಿಂದ 23 ರನ್ ಸಿಡಿಸಿ ಪ್ರೇಕ್ಷಕರ ಮನರಂಜಿಸಿದರು.
ಈ ಗೆಲುವಿನೊಂದಿಗೆ ಆರ್ ಸಿಬಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಮುಂಬೈ ಕೂಡಾ ಎರಡು ಪಂದ್ಯಗಳನ್ನು ಗೆದ್ದಿದ್ದರೂ ಸರಾಸರಿ ಆಧಾರದಲ್ಲಿ ಆರ್ ಸಿಬಿ ಅಗ್ರಸ್ಥಾನ ಪಡೆಯಿತು. ನಿನ್ನೆ ವೀಕೆಂಡ್ ಅಲ್ಲದೇ ಹೋಗಿದ್ದರೂ ಆರ್ ಸಿಬಿ ಆಡುವ ಪಂದ್ಯವಾಗಿದ್ದರಿಂದ ಎಂದಿನಂತೇ ಪ್ರೇಕ್ಷಕರು ಫುಲ್ ಹಾಜರಾತಿಯಿದ್ದಿದ್ದು ವಿಶೇಷ. ಇದಕ್ಕಾಗಿಯೇ ಸ್ಮೃತಿ ಮಂಧಾನಾ ಪಂದ್ಯದ ಬಳಿಕ ಚಿನ್ನಸ್ವಾಮಿ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದರು.