ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಡಬ್ಲ್ಯುಪಿಎಲ್ ಕೂಟದ ಇಂದಿನ ಪಂದ್ಯದಲ್ಲಿ ಎಲ್ಲಿಸ್ ಪೆರ್ರಿ ಬ್ಯಾಟಿಂಗ್ ನೆರವಿನಿಂದ ಯುಪಿ ವಾರಿಯರ್ಸ್ ವಿರುದ್ಧ ಆರ್ ಸಿಬಿ 180 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಇಂದು ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಬ್ಯಾಟಿಂಗ್ ಗಿಳಿದ ಆರ್ ಸಿಬಿಗೆ ನಾಯಕಿ ಸ್ಮೃತಿ ಮಂಧನಾ ಕೇವಲ 6 ರನ್ ಗಳಿಗೆ ಔಟ್ ಆಗಿ ಆಘಾತ ನೀಡಿದರು. ಆದರೆ ನಂತರ ನಡೆದಿದ್ದು ಡೇನಿಯಲ್ ವ್ಯಾಟ್-ಎಲ್ಲಿಸ್ ಪೆರ್ರಿ ಬೊಂಬಾಟ್ ಆಟ.
ಇಬ್ಬರೂ ಎರಡನೇ ವಿಕೆಟ್ ಗೆ 94 ರನ್ ಗಳ ಜೊತೆಯಾಟವಾಡಿದರು. ಈ ವೇಳೆ 57 ರನ್ ಗಳಿಸಿದ್ದ ಡೇನಿಯಲ್ ಔಟಾದರು. ಆದರೆ ಪೆರ್ರಿ ತಮ್ಮ ಎಂದಿನ ಅಬ್ಬರ ಮುಂದುವರಿಸಿದರು. ಇದರ ನಡುವೆ ರಿಚಾ ಘೋಷ್ 8, ಕನಿಕಾ ಅಹುಜಾ 5, ಜಾರ್ಜಿಯಾ ವಾರೆಹಾಮ್ 7, ಕಿಮ್ ಗ್ರಾಥ್ 2 ರನ್ ಗಳಿಸಿ ಔಟಾದರು. ಆದರೆ 20 ಓವರ್ ಗಳವರೆಗೆ ಬ್ಯಾಟಿಂಗ್ ನಡೆಸಿದ ಎಲ್ಲಿಸ್ ಪೆರ್ರಿ ಕೇವಲ 56 ಎಸೆತಗಳಲ್ಲಿ 3 ಸಿಕ್ಸರ್ ಗಳೊಂದಿಗೆ ಅಜೇಯ 90 ರನ್ ಗಳಿಸಿದರು.
ಇದುವರೆಗೆ ಡಬ್ಲ್ಯುಪಿಎಲ್ ಕೂಟದಲ್ಲಿ ಯಾರೂ ಶತಕ ಗಳಿಸಿರಲಿಲ್ಲ. ಹೀಗಾಗಿ ಎಲ್ಲಿಸ್ ಇಂದು ಆ ದಾಖಲೆ ಮಾಡುವರೇ ಎಂದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಎಲ್ಲಿಸ್ ಬ್ಯಾಟಿಂಗ್ ನ್ನು ಚಿನ್ನಸ್ವಾಮಿ ಪ್ರೇಕ್ಷಕರು ಎಂಜಾಯ್ ಮಾಡಿದರು. ಇದೀಗ ಆರ್ ಸಿಬಿ ಗೆಲ್ಲಲು 181 ರನ್ ಗಳಿಸಬೇಕಿದೆ.