ಡಬ್ಲ್ಯುಪಿಎಲ್: ಕೈ ಜಾರಿದ ಹೊತ್ತಲ್ಲಿ ಎದ್ದು ನಿಂತ ಆರ್ ಸಿಬಿ

ಭಾನುವಾರ, 19 ಮಾರ್ಚ್ 2023 (08:40 IST)
Photo Courtesy: Twitter
ಮುಂಬೈ: ಡಬ್ಲ್ಯುಪಿಎಲ್ ಕೂಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಡವಾಗಿ ಎಚ್ಚೆತ್ತುಕೊಂಡಿದ್ದು ಕೂಟದಲ್ಲಿ ಎರಡನೇ ಗೆಲುವು ಸಾಧಿಸಿದೆ.

ಗುಜರಾತ್ ಜೈಂಟ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯವನ್ನು ಆರ್ ಸಿಬಿ 8 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತ್ತು.

ಈ ಮೊತ್ತ ಬೆನ್ನತ್ತಿದ ಆರ್ ಸಿಬಿಗೆ ಆರಂಭಿಕರು ಸ್ಪೋಟಕ ಆರಂಭ ನೀಡಿದರು. ಬಹಳ ದಿನಗಳ ನಂತರ ನಾಯಕಿ ಸ್ಮೃತಿ ಮಂಧನಾ ಬ್ಯಾಟ್ ನಿಂದ ಕೊಂಚ ರನ್ ಹರಿದಬಂತು. ಅವರು 37 ರನ್ ಗಳಿಸಿ ಔಟಾದರು. ಆದರೆ ಇನ್ನೊಂದೆಡೆ ಪ್ರತೀ ಬಾಲ್ ನ್ನೂ ಬೌಂಡರಿ ಗೆರೆ ದಾಟಿಸುತ್ತಿದ್ದ ಸೋಫಿ ಡಿವೈನ್ ಕೇವಲ 36 ಎಸೆತಗಳಿಂದ 9 ಬೌಂಡರಿ, 8 ಸಿಕ್ಸರ್ ಸಹಿತ 99 ರನ್ ಗಳಿಸಿ ಔಟಾದರು. ಸೋಫಿ ಮಹಿಳಾ ಐಪಿಎಲ್ ನ ಮೊದಲ ಶತಕ ಗಳಿಸುತ್ತಾರೆ ಎಂಬುದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ 99 ರನ್ ಗಳಿಸಿದ್ದಾಗಲೂ ಯಾವುದೇ ಮುಲಾಜಿಲ್ಲದೇ ಬಾಲ್ ಎತ್ತಿ ಹೊಡೆಯಲು ಹೋಗಿ ಕ್ಯಾಚ್ ಔಟಾದರು. ಸ್ಮೃತಿ-ಸೋಫಿ ಶತಕದ ಜೊತೆಯಾಟವಾಡಿದರು.

ಬಳಿಕ ಎಲ್ಸೆ ಪೆರಿ ಅಜೇಯ 19, ಹೀದರ್ ನೈಟ್ ಅಜೇಯ 22 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಮುಗಿಸಿದರು. ಅಂತಿಮವಾಗಿ ಆರ್ ಸಿಬಿ 15.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತು. ಇದರೊಂದಿಗೆ ಒಟ್ಟು 7 ಪಂದ್ಯಗಳಿಂದ ಎರಡು ಗೆಲುವು ಸಂಪಾದಿಸಿತು. ಆದರೆ ಆರ್ ಸಿಬಿ ಪ್ಲೇ ಆಫ್ ಕನಸು ಈಗ ಕ್ಷೀಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ