ಮುಂಬೈ: ಭಾರತ ಕ್ರಿಕೆಟ್ ತಂಡದಲ್ಲಿ ಈಗ ವಿರಾಟ್ ಕೊಹ್ಲಿಯದ್ದೇ ಫೈನಲ್ ಮಾತು, ಅವರು ಹೇಳಿದ್ದೇ ನಿರ್ಧಾರ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಇದೀಗ ಬಿಸಿಸಿಐ ಮಾಜಿ ಅಧಿಕಾರಿಯೇ ಈ ವಿಷಯ ಬಹಿರಂಗಪಡಿಸಿದ್ದಾರೆ.
ಬಿಸಿಸಿಐಗೂ ವಿರಾಟ್ ಕೊಹ್ಲಿ ಎಂದರೆ ಭಯ. ಅದಕ್ಕೇ ಅವರು ಹೇಳಿದ ಹಾಗೆ ಕೇಳುತ್ತಿದೆ. ಅವರನ್ನು ವಿರೋಧಿಸಲು ಭಯಪಡುತ್ತಿದೆ ಎಂದು ಸುಪ್ರೀಂ ಕೋರ್ಟ್ ನಿಯಮಿತ ಬಿಸಿಸಿಐ ಆಡಳಿತ ಮಂಡಳಿ ಸದಸ್ಯರಾಗಿದ್ದ ರಾಮಚಂದ್ರ ಗುಹಾ ಹೇಳಿದ್ದಾರೆ.
ಅನಿಲ್ ಕುಂಬ್ಳೆ-ವಿರಾಟ್ ಕೊಹ್ಲಿ ವಿವಾದದ ಸಂದರ್ಭದಲ್ಲಿ ರಾಮಚಂದ್ರ ಗುಹಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕೊಹ್ಲಿಯನ್ನು ಎಷ್ಟು ಆರಾಧಿಸುತ್ತದೆಂದರೆ ಬಹುಶಃ ಕೇಂದ್ರ ಸರ್ಕಾರದ ಸಚಿವರೂ ಪ್ರಧಾನಿ ಮೋದಿಯನ್ನು ಇಷ್ಟೊಂದು ತಲೆ ಮೇಲೆ ಹೊತ್ತು ಕೂರಿಸಲಾರರು’ ಎಂದು ರಾಮಚಂದ್ರ ಗುಹಾ ಟೀಕಿಸಿದ್ದಾರೆ.
ಎಷ್ಟೆಂದರೆ ಬಿಸಿಸಿಐ ಆಂತರಿಕ ವಿಚಾರಗಳಲ್ಲೂ ಕೊಹ್ಲಿ ಅಭಿಪ್ರಾಯಕ್ಕೆ ಮಣೆ ಹಾಕಲಾಗುತ್ತಿದೆ. ಟೂರ್ನಮೆಂಟ್ ಗಳ ವೇಳಾಪಟ್ಟಿ ಅವರನ್ನು ಕೇಳಿಯೇ ತೀರ್ಮಾನವಾಗುತ್ತಿದೆ. ಕೊಹ್ಲಿ ಅತ್ಯುತ್ತಮ ಆಟಗಾರ ಹೌದು. ಆದರೆ ಈ ಮಟ್ಟಿಗೆ ಅವರನ್ನು ತಲೆ ಮೇಲೆ ಕೂರಿಸಿರುವುದು ಸರಿಯಲ್ಲ. ಬಿಸಿಸಿಐ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರೈ, ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಮುಂತಾದವರೂ ಕೊಹ್ಲಿ ಸರ್ವಾಧಿಕಾರದ ಧೋರಣೆಯಿಂದ ಬೆಚ್ಚಿ ಬಿದ್ದಿದ್ದಾರೆ ಎಂದು ರಾಮಚಂದ್ರ ಗುಹಾ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ