ವಿಶ್ವದಾಖಲೆಯ ಹೊಸ್ತಿಲಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್
ಬುಧವಾರ, 12 ಜುಲೈ 2017 (10:14 IST)
ಲಂಡನ್: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ನೂತನ ದಾಖಲೆ ಬರೆಯಲು ಹೊರಟಿದ್ದಾರೆ. ಮಹಿಳಾ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ಮಹತ್ವದ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ.
1999 ರಲ್ಲಿ 16 ವರ್ಷದ ಬಾಲಕಿಯಾಗಿದ್ದಾಗ ಕ್ರಿಕೆಟ್ ಫೀಲ್ಡ್ ಇಳಿದು ಶತಕದ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಮಿಥಾಲಿ ಇದೀಗ ಮಹಿಳಾ ತಂಡದ ನಾಯಕಿ. ಈ ವಿಶ್ವಕಪ್ ನಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಅವರು ಇದುವರೆಗೆ ತಮ್ಮ ವೃತ್ತಿ ಜೀವನದಲ್ಲಿ 5959 ರನ್ ಗಳಿಸಿದ್ದಾರೆ. ಇನ್ನೂ 34 ರನ್ ಗಳಿಸಿದರೆ ಮಿಥಾಲಿ ಮಹಿಳಾ ಏಕದಿನ ಕ್ರಿಕೆಟ್ ನಲ್ಲೇ ಅತ್ಯಧಿಕ ರನ್ ಗಳಿಸಿದ ಇಂಗ್ಲೆಂಡ್ ನ ಶಾರ್ಲೆಟ್ ಎಡ್ವರ್ಡ್ ಅವರ ದಾಖಲೆ ಮುರಿಯಲಿದ್ದಾರೆ.
ಅದರೊಂದಿಗೆ ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಭಾರತದ ವನಿತೆ ಹೊಸ ಚರಿತ್ರೆ ಸೃಷ್ಟಿಸಲಿದ್ದಾರೆ. ವಿಶೇಷವೆಂದರೆ ಮಹಿಳಾ ಕ್ರಿಕೆಟ್ ನಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆಯೂ ಭಾರತದ ಜೂಲನ್ ಗೋಸ್ವಾಮಿ ಹೆಸರಿನಲ್ಲಿದೆ. ಇದೀಗ ಬ್ಯಾಟಿಂಗ್ ದಾಖಲೆಯೂ ಭಾರತದ ಪಾಲಾದರೆ ನಿಜಕ್ಕೂ ಹೆಮ್ಮೆಯ ವಿಷಯ.
ಎಡ್ವರ್ಡ್ ಗೆ ಹೋಲಿಸಿದರೆ ಮಿಥಾಲಿ ಕಡಿಮೆ ಪಂದ್ಯದಲ್ಲಿ ಈ ದಾಖಲೆ ಮಾಡಲಿದ್ದಾರೆ. ಮೊದಲ ಪಂದ್ಯದಲ್ಲೇ ಶತಕ ಗಳಿಸಿ ದಾಖಲೆಯ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಮಿಥಾಲಿ ಕಳೆದ ಪಂದ್ಯದಲ್ಲಿ ಮೊದಲ ಬಾರಿಗೆ ಶೂನ್ಯಕ್ಕೆ ಔಟಾದ ಅಪಖ್ಯಾತಿಗೂ ಒಳಗಾಗಿದ್ದರು. ಆದರೆ ಪುರುಷ ಕ್ರಿಕೆಟ್ ನ್ನೇ ಪೂಜಿಸುವ ಭಾರತದಲ್ಲಿ ಮಹಿಳೆಯರು ತಾವೂ ಏನು ಕಮ್ಮಿಯಿಲ್ಲ ಎಂದು ಸಾಧಿಸಿ ತೋರಿಸಿದ್ದಾರೆ.