ಕೌಂಟಿ ಕ್ರಿಕೆಟ್ ಗಾಗಿ ದೇಶದ ಪರ ಆಡುವುದನ್ನು ತಪ್ಪಿಸಿಕೊಳ್ಳಲಿದ್ದಾರೆಯೇ ಆರ್ ಅಶ್ವಿನ್?!
ಶನಿವಾರ, 2 ಸೆಪ್ಟಂಬರ್ 2017 (08:44 IST)
ಲಂಡನ್: ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡುತ್ತಿರುವ ಆರ್ ಅಶ್ವಿನ್ ಇದೀಗ ವಿದೇಶೀ ಕ್ಲಬ್ ಕ್ರಿಕೆಟ್ ಗಾಗಿ ದೇಶದ ಪರ ಆಡುವ ಅವಕಾಶವನ್ನೇ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.
ಇದೇ ತಿಂಗಳು ಮತ್ತು ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ನಡೆಯಲಿದೆ. ಆದರೆ ಕೌಂಟಿ ಕ್ರಿಕೆಟ್ ವೇಳಾಪಟ್ಟಿಯಿಂದಾಗಿ ಈ ಸರಣಿಗೆ ಅವರು ಅಲಭ್ಯರಾಗುವ ಸಾಧ್ಯತೆಯಿದೆ.
ವಾರ್ಸೆಸ್ಟರ್ ಶೈರ್ ತಂಡದ ಪರ ಆಡುತ್ತಿರುವ ಅಶ್ವಿನ್ ಗೆ ಆಸ್ಟ್ರೇಲಿಯಾ ಸರಣಿಯಿಂದ ವಿನಾಯಿತಿ ನೀಡಲು ಸ್ವತಃ ಬಿಸಿಸಿಐ ಮನಸ್ಸು ಮಾಡಿದೆ ಎನ್ನಲಾಗಿದೆ. 2018 ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಅಶ್ವಿನ್ ಗೆ ಕೌಂಟಿ ಕ್ರಿಕೆಟ್ ನಲ್ಲಿ ಮುಂದುವರಿಯಲು ಬಿಸಿಸಿಐ ಅನುಮತಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನೊಂದೆಡೆ ಕ್ರಿಕೆಟ್ ವಾಹಿನಿಯೊಂದಿಗೆ ಸಂದರ್ಶನ ನೀಡುತ್ತಾ ಮಾತನಾಡಿದ ಅಶ್ವಿನ್ ‘ಬಹುಶಃ ನನ್ನನ್ನು ಆಸ್ಟ್ರೇಲಿಯಾ ಸರಣಿಗಾಗುವಾಗ ಕರೆಸಿಕೊಳ್ಳಬಹುದು. ಸದ್ಯದ ಮಟ್ಟಿಗೆ ಎಲ್ಲಾ ಕೌಂಟಿ ಪಂದ್ಯಗಳಿಗೂ ಲಭ್ಯನಿರುವುದಾಗಿ ನನ್ನ ತಂಡದ ಮ್ಯಾನೇಜರ್ ಗೆ ಹೇಳಿದ್ದೇನೆ. ಈ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನವಾಗಿಲ್ಲ’ ಎಂದು ಅಶ್ವಿನ್ ಹೇಳಿದ್ದಾರೆ.