ಕೊಹ್ಲಿಯ ನಿರ್ಧಾರ ಕೆಎಲ್ ರಾಹುಲ್ ಗೆ ಸಂಕಷ್ಟ

ಶುಕ್ರವಾರ, 1 ಸೆಪ್ಟಂಬರ್ 2017 (08:53 IST)
ಕೊಲೊಂಬೊ: ಯಾವುದೇ ಬ್ಯಾಟ್ಸ್ ಮನ್ ಆದರೂ ಕೆಲವು ನಿರ್ದಿಷ್ಟ ಸ್ಥಾನದಲ್ಲಿ ಆಡಿದರಷ್ಟೇ ಯಶಸ್ಸು ಸಾಧ್ಯ. ಅದು ಈಗ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೂ ಅನುಭವವಾಗುತ್ತಿದೆ.

 
ರಾಹುಲ್ ಹೇಳಿ ಕೇಳಿ ಹೊಸ ಚೆಂಡಿನೊಂದಿಗೆ ಚೆನ್ನಾಗಿ ಆಡಬಲ್ಲ ಕ್ರಿಕೆಟಿಗ. ಹೀಗಾಗಿಯೇ ಅವರು ಆರಂಭಿಕರಾಗಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಹಳೇ ಚೆಂಡಿನೊಂದಿಗೆ ಅವರ ದಾಖಲೆ ಉತ್ತಮವಾಗಿಲ್ಲ.

ಆದರೆ  ಅನಿವಾರ್ಯ ನೋಡಿ. ಸದ್ಯಕ್ಕೆ ಭಾರತ ತಂಡದಲ್ಲಿ ಆರಂಭಿಕ ಸ್ಥಾನಕ್ಕಿರುವಷ್ಟು ಪೈಪೋಟಿ ಇನ್ಯಾವುದಕ್ಕೂ ಇಲ್ಲ. ಶಿಖರ್ ಧವನ್ ಫಾರ್ಮ್ ಕಂಡುಕೊಂಡು ತಂಡಕ್ಕೆ ಬಂದ ಮೇಲೆ ಟೀಂ ಇಂಡಿಯಾ ಚಿಂತಕರಿಗೆ ಬಿಸಿ ತುಪ್ಪವಾಗಿದ್ದಾರೆ.

ರಾಹುಲ್ ಗಾಯಾಳುವಾಗಿ ತಂಡದಿಂದ ಹೊರಗಿದ್ದಾಗ ಅದ್ಭುತ ಪ್ರದರ್ಶನದ ಮೂಲಕ ತಂಡಕ್ಕೆ ಬಂದ ಅವರು ಈಗಲೂ ಅದೇ ಫಾರ್ಮ್ ಮುಂದುವರಿಸಿದ್ದಾರೆ. ಇನ್ನೊಬ್ಬ ಖಾಯಂ ಆರಂಭಿಕ ರೋಹಿತ್ ಶರ್ಮಾ ಕೂಡಾ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಹಾಗಾಗಿ ಗಾಯದಿಂದ ಚೇತರಿಸಿಕೊಂಡು ಬರುವಷ್ಟರಲ್ಲಿ ರಾಹುಲ್ ಗೆ ತಮ್ಮ ಎಂದಿನ ಆರಂಭಿಕ ಸ್ಥಾನ ಕೈತಪ್ಪಿದೆ.

ಅನಿವಾರ್ಯವಾಗಿ ಅವರೀಗ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಇದು ಅವರ ಫಾರ್ಮ್ ಮೇಲೆ ಪರಿಣಾಮ ಬೀರಿದೆ. ಟೆಸ್ಟ್ ನಲ್ಲಿ ಆರಂಭಿಕರಾಗಿದ್ದಾಗ ಎಂದಿನಂತೆ ಉತ್ತಮ ಕೊಡುಗೆ ನೀಡಿದ್ದ ಅವರು ಇದೀಗ ಏಕದಿನ ತಂಡದಲ್ಲಿ ಮಧ್ಯಮ ಕ್ರಮಾಂಕ ಸಿಕ್ಕಿದ ಮೇಲೆ ಮಂಕಾಗಿದ್ದಾರೆ. ಹೇಳಿಕೊಳ್ಳುವಂತಹ ಪ್ರದರ್ಶನ ಬರುತ್ತಿಲ್ಲ. ಇದು ಮುಂದೊಂದು ದಿನ  ತಂಡದಲ್ಲಿ ಅವರ ಸ್ಥಾನಕ್ಕೆ ಸಂಚಾಕಾರ ತಂದರೂ ತರಬಹುದು.

ಕೊಹ್ಲಿ ಕೂಡಾ ತೃತೀಯ ಏಕದಿನ ಪಂದ್ಯದಲ್ಲಿ ತಮ್ಮ ಎಂದಿನ ಮೂರನೇ ಕ್ರಮಾಂಕ ಬಿಟ್ಟು ಬೇರೆ ಕ್ರಮಾಂಕದಲ್ಲಿ ಆಡಲಿಳಿದರು. ಆದರೆ ಯಶಸ್ಸು ಸಿಗಲಿಲ್ಲ. ನಾಲ್ಕನೇ ಪಂದ್ಯದಲ್ಲಿ ಎಂದಿನ ಮೂರನೇ ಕ್ರಮಾಂಕಕ್ಕೆ ಬಂದೊಡನೆ ಶತಕ ಗಳಿಸಿದರು. ಹಾಗೇ ರಾಹುಲ್ ಕೂಡಾ ಮತ್ತೆ ಮೊದಲಿನ ಆರಂಭಿಕ ಸ್ಥಾನಕ್ಕೆ ಬೇಗ  ಬರುವಂತಾಗಲಿ ಎನ್ನುವುದೇ ಅಭಿಮಾನಿಗಳ ಹಾರೈಕೆ.

ಇದನ್ನೂ ಓದಿ.. ಚರ್ಚೆಗೆ ಕಾರಣವಾಯ್ತು ಕೊಹ್ಲಿ ಮಾಡಿದ ಆ ಪ್ರಯೋಗ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ