ಮೈಸೂರು; ವಿಶ್ವವಿಖ್ಯಾತ ಜಂಬೂ ಸವಾರಿಗೆ ಚಾಲನೆ

ಗುರುವಾರ, 6 ಅಕ್ಟೋಬರ್ 2011 (13:25 IST)
WD
ಸಾಂಸ್ಕೃತಿಕ ನಗರಿ ಮೈಸೂರು ದಸರಾ ಪ್ರಯುಕ್ತ ನಡೆಯುವ ವಿಶ್ವವಿಖ್ಯಾತ ಜಂಬೂ ಸವಾರಿಗೆ 12-54 ಧನುರ್ ಲಗ್ನ ಶುಭ ಮಹೂರ್ತದಲ್ಲಿ ಚಾಲನೆ ನೀಡಲಾಯಿತು, ವಿಜಯದಶಮಿ ಹಿನ್ನೆಲೆಯಲ್ಲಿ ಗುರುವಾರ ಮೈಸೂರು ಒಡೆಯರ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬನ್ನಿ ಪೂಜೆ ನೆರವೇರಿಸಿದರು.

ಬೆಳಗ್ಗೆ ಬೆಳ್ಳಿರಥದ ಮೂಲಕ ಆಗಮಿಸಿದ ಒಡೆಯರ್ ಸಂಪ್ರಾಯದಂತೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಈ ಪೂಜೆಯ ನಂತರ ಇಂದು ಮೈಸೂರು ಒಡೆಯರ್ ಅವರ ಅಂಬಾವಿಲಾಸ ಅರಮನೆಯಲ್ಲಿನ ಖಾಸಗಿ ದರ್ಬಾರ್ ಅಂತ್ಯಗೊಳ್ಳಲಿದೆ.

13ನೇ ಬಾರಿ ಅಂಬಾರಿ ಹೊತ್ತು ಹೆಜ್ಜೆ ಹಾಕಿದ ಗಜರಾಜ ಬಲರಾಮ. ಈ ಸಂದರ್ಭದಲ್ಲಿ ಬಲರಾಮನಿಗೆ ಶ್ರೀರಾಮ, ಅರ್ಜುನ, ಅಭಿಮನ್ಯ, ಹರ್ಷ, ಗೋಪಿ, ವಿಕ್ರಮ್, ಕೋಕಿಲಾ, ಕಾಂತಿ, ಕಾವೇರಿ ಸೇರಿದಂತೆ 12 ಆನೆಗಳು ಸಾಥ್ ನೀಡಿದವು.

ವಿಶ್ವವಿಖ್ಯಾತ ಜಂಬೂ ಸವಾರಿಗೆ 12-54ಕ್ಕೆ ಚಾಲನೆ ನೀಡಲಾಯಿತು. ಜಂಬೂ ಸವಾರಿಯ ವಿಶೇಷ ಆಕರ್ಷಣೆ ಎಂದರೆ ಅಂಬಾರಿ ಮತ್ತು ಸ್ತಬ್ದ ಚಿತ್ರಗಳು. 750 ಕೆ.ಜಿ ರತ್ನ ಖಚಿತ ಚಿನ್ನದ ಅಂಬಾರಿ ಹೊತ್ತು ಅದರಲ್ಲಿ ಚಾಮುಂಡೇಶ್ವರಿ ದೇವಿಯನ್ನು ಕೂರಿಸಿ ಗಜರಾಜ ಬಲರಾಮ ಸಾಗುತ್ತಿದ್ದಂತೆಯೇ ಸೇರಿದ್ದ ಜನರು ಹರ್ಷೋದ್ಘಾರದೊಂದಿಗೆ ವೀಕ್ಷಿಸಿ ಪುಳಕಿತರಾದರು.

ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ ಒಟ್ಟು 34 ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ. ಮೈಸೂರು ಪೇಟ ತೊಟ್ಟಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ಡಾಟಿ, ಮೈಸೂರು ಮೇಯರ್ ಪುಷ್ಪಲತಾ, ಉಸ್ತುವಾರಿ ಸಚಿವ ರಾಮದಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬಿಗಿ ಬಂದೋಬಸ್ತ್:
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಂಬೂ ಸವಾರಿ ನಡೆಯುತ್ತಿದ್ದು, ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿಗಳು, ಇಡೀ ದೇಶದ ಜನತೆಗೆ ಇಂದು ಶುಭ ದಿನ. ದೇಶದ ಜನತೆಗೆ ಶುಭಾಶಯ ಸಲ್ಲಿಸುವುದಾಗಿ ಹೇಳಿದರು. ಅಲ್ಲದೇ ರಾಜ್ಯದ ಎಲ್ಲಾ ಸಂಕಷ್ಟಗಳು ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿರುವುದಾಗಿ ತಿಳಿಸಿದರು.

ವೆಬ್ದುನಿಯಾವನ್ನು ಓದಿ