ಮೈಸೂರು: ಮೈಸೂರು -ಕೊಡಗು ಕ್ಷೇತ್ರದಲ್ಲಿ ಹಳೇ ಹುಲಿ ಮತ್ತು ಬಿಸಿರಕ್ತದ ಸಿಂಹದ ನಡುವೆ ಹೋರಾಟವೆಂದು ಬಣ್ಣಿಸಲಾಗಿದ್ದ ಚುನಾವಣೆಯಲ್ಲಿ ಕೊನೆಗೂ ಸಿಂಹ ಗೆದ್ದಿದೆ. ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ನ ಹಳೆ ಹುಲಿ ವಿಶ್ವನಾಥ್ ಅವರನ್ನು 9 ಸಾವಿರ ಮತಗಳ ಅಂತರದಿಂದ ಸೋಲಿಸಿ, ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದ್ದಾರೆ.
ಮೋದಿಯವರ ಪ್ರಚಂಡ ಅಲೆಗೆ ಕಾಂಗ್ರೆಸ್‌ನ ಅನೇಕ ಅಭ್ಯರ್ಥಿಗಳು ನೆಲಕಚ್ಚಿದ್ದು, ಅವರ ಪೈಕಿ ವಿಶ್ವನಾಥ್ ಕೂಡ ಒಬ್ಬರು. ಮೈಸೂರಿನಲ್ಲಿ ಕೂಡ ನರೇಂದ್ರ ಮೋದಿ ಅಲೆ ಬೀಸಿರುವುದು ಈ ಫಲಿತಾಂಶದಿಂದ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಪರಾಭವಗೊಂಡಿರುವುದರಿಂದ ಸಿಎಂ ತಲೆತಗ್ಗಿಸುವಂತಾಗಿದೆ.