ಬೆಂಗಳೂರು: ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮೇಲೆ ಐದು ಕೇಸ್‌ಗಳು ಅವರ ಮೇಲಿವೆ. ಹಾಗಾಗಿ ನಾವು ಹಾಗೂ ಭೇಟಿ ಕೊಟ್ಟಿಲ್ಲ. ಆದರೆ ಸುಹಾಸ್ ಶೆಟ್ಟಿ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಕೊಲೆಯಾದ ಸುಹಾಸ್ ಶೆಟ್ಟಿಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಯಾರೂ ಸಾಂತ್ವನ ಹೇಳದ ವಿಚಾರ ಬಗ್ಗೆ ಪ್ರಶ್ನೆಯೊಂದಕ್ಕೆ ಪರಮೇಶ್ವರ್ ಈ ರೀತಿ ಉತ್ತರಿಸಿದರು. ಕರ್ನಾಟಕ ಪೊಲೀಸ್ ಇಲಾಖೆ ಸಮರ್ಥವಾಗಿದೆ. ಹೀಗಾಗಿ, ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆಗೆ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎಗೆ ವಹಿಸಲು ಬಿಜೆಪಿ ನಾಯಕರು ಹೇಳುತ್ತಿರುವುದು ಅವರ ಅಭಿಪ್ರಾಯ. ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಎಂಟು ಜನರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ತನಿಖೆ ಚೆನ್ನಾಗಿ ನಡೆಯುತ್ತಿದೆ ಎಂಬುದು ನಮ್ಮ ಅಭಿಪ್ರಾಯ. ಹಾಗಾಗಿ ಈ ಪ್ರಕರಣ ಎನ್ಐಎಗೆ ಕೊಟ್ಟಿಲ್ಲ ಅದರ ಅಗತ್ಯ ಇಲ್ಲ ಎಂದು ಬೆಂಗಳೂರಿನಲ್ಲಿ ಹೇಳಿದರು.
ಇದು ಪ್ರತೀಕಾರಕ್ಕೆ ನಡೆದಿದೆಯಾ ಇಲ್ವಾ ಎನ್ನುವುದು ಗೊತ್ತಿಲ್ಲ. ಏನೇ ಕಾರಣ ಇದ್ದರೂ ತನಿಖೆ ನಡೆಸಿದ ಮೇಲೆ ಗೊತ್ತಾಗುತ್ತದೆ. ನಾವು ಊಹೆ ಮಾಡಿ ಇದೇ ಕಾರಣ ಅಂತ ಹೇಳಲು ಬರುವುದಿಲ್ಲ. ತನಿಖೆ ಮುಗಿಯೋವರೆಗೂ ಏನೂ ಹೇಳಲು ಸಾಧ್ಯವಿಲ್ಲ ಎಂದರು.