ನಮ್ಮ ದೈನಂದಿನ ಜೀವನದಲ್ಲಿ ಸಂಗೀತ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ, ಅದರಲ್ಲೂ ಇತ್ತೀಚಿನ ಯುವ ಪೀಳಿಗೆ ಸಂಗೀತವನ್ನು ಆಲಿಸದೇ ದಿನ ಕಳೆಯುವುದು ಕಷ್ಟಸಾಧ್ಯ ಎಂದೇ ಹೇಳಬಹುದು. ಸಂಗೀತ ಕೇಳಲೆಂದೇ ಇಂದಿನ ದಿನಗಳಲ್ಲಿ ತರಹೇವಾರಿ ಹೆಡ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಅಷ್ಟೇ ಅಲ್ಲ ಪಾರ್ಟಿ ಪಬ್ ಅದು ಇದು ಅಂತಾ ದಿನದಲ್ಲಿ ಒಮ್ಮೆ ಆದರೂ ನಾವು ಸಂಗೀತದ ಸುಳಿಯಲ್ಲಿ ಸಿಕ್ಕಿಬಿದ್ದಿರುತ್ತೇವೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಸಂಗೀತದಿಂದ ಕೇವಲ ಮನೋರಂಜನೆ ಮಾತ್ರವಲ್ಲ ಅದು ನಮ್ಮ ಆರೋಗ್ಯದ ಮೇಲೆ ಕೂಡಾ ಪರಿಣಾಮ ಬೀರುತ್ತದೆ ಹೇಗೆ ಎಂದು ತಿಳಿದರೆ ನೀವು ಅಚ್ಚರಿಪಡ್ತಿರಿ.
ಅನಾದಿ ಕಾಲದಿಂದಲೂ ಸಂಗೀತ ರಾಗ, ತಾಳ, ಲಯ ಬದ್ಧ, ನಾದವು ವಿಶ್ವದ ಎಲ್ಲಾ ಸಂಸ್ಕೃತಿಗಳಲ್ಲಿ ಸಂಗೀತ ಪ್ರಕಾರಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ ಬಂದಿದೆ. ಪ್ರತಿಯೊಂದು ಶುಭಕಾರ್ಯಗಳಿಂದ ಹಿಡಿದು ದುಃಖದ ಸನ್ನಿವೇಶದಲ್ಲೂ ಮನಸ್ಸನ್ನು ನಿರಾಳತೆಗೆ ಕೊಂಡೊಯ್ಯುವ ಶಕ್ತಿ ಈ ಸಂಗೀತಕ್ಕಿದೆ. ಕೆಲವು ಸಂಗೀತಗಳು ಭಾವನೆಗಳನ್ನು ಕೆರಳಿಸುತ್ತವೆ ಇನ್ನೂ ಕೆಲವು ಸಂಗೀತವು ಮನಸ್ಸಿನ ನೋವನ್ನು ಮರೆಸಲು ಸಹಾಯಮಾಡುತ್ತದೆ. ಅಲ್ಲದೇ ಚಂಚಲ ಮನಸಿಗೆ ಮುದ ನೀಡುವ ಶಕ್ತಿ ಕೂಡಾ ಸಂಗೀತಕ್ಕಿದೆ. ಹಿಂದೆ ಸಂಗೀತದಿಂದ ಮಳೆ ತರಿಸಿದರು, ಸಂಗೀತದಿಂದ ಜೀವ ತುಂಬಿದರು ಎನ್ನುವ ಮಾತು ಕೇಳಿರುತ್ತೇವೆ ಬಹುಷಃ ನಮಗಿಂತ ಹಿಂದಿನ ಪೀಳಿಗೆಯವರು ಈ ಸಂಗೀತದ ಮಹತ್ವವನ್ನು ಮೊದಲೇ ತಿಳಿದಿದ್ದರೇನೋ ಹಾಗಾಗಿಯೇ ಒತ್ತಡ, ಮನಸ್ಥಿತಿ ಬದಲಾವಣೆಗೆ ಹಿಂದೆಲ್ಲಾ ಸಂಗೀತ ಕಚೇರಿಗಳನ್ನು ಏರ್ಪಡಿಸುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಸಂಗೀತವನ್ನು ಆರೋಗ್ಯ ಸುಧಾರಣೆಯಲ್ಲೂ ಬಳಕೆಯಾಗುತ್ತಿದೆ ಅದು ಹೇಗೆ ಅಂತೀರಾ ಇಲ್ಲಿದೆ ಮಾಹಿತಿ .....
* ಚಿಕ್ಕ ವಯಸ್ಸಿನ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುವುದರಿಂದ ಮಗುವಿನ ಮೆದುಳು ಮತ್ತು ಮೌಖಿಕ ಕೌಶಲ್ಯಗಳು, ಸಂವಹನ ಮುಂದಾದವುಗಳ ವೃದ್ಧಿಗೆ ಸಹಾಯಕಾರಿಯಾಗುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಸಾಬೀತುಪಡಿಸಿವೆ.
* 8 ರಿಂದ 11 ವರ್ಷ ವಯಸ್ಸಿನವರು ಹೆಚ್ಚಿನ ಸಂಗೀತದ ಅಧ್ಯಯನದಲ್ಲಿ ತೊಡಗಿದ್ದರೆ ಅವರ ಐಕ್ಯೂ ಹೆಚ್ಚಿರುತ್ತದೆ ಮತ್ತು ದೃಷ್ಟಿಗೋಚರ ಸಾಮರ್ಥ್ಯವು ಉಳಿದವರಿಗಿಂತ ಜಾಸ್ತಿ ಎಂಬುದು ದೃಢಪಟ್ಟಿದೆ.
*ಮರೆವಿನ ಕಾಯಿಲೆ ಅಥವಾ ನೆನಪಿನ ಶಕ್ತಿಯನ್ನು ಕಳೆದುಕೊಂಡಂತ ಸನ್ನಿವೇಶಗಳಲ್ಲಿ ಸಂಗೀತವನ್ನು ಆಲಿಸುವ ಮೂಲಕ ಶೀಘ್ರವಾಗಿ ಸ್ಮರಣೆಗಳನ್ನು ಹಿಂಪಡಿಯಬಹುದಾಗಿದೆ.
* ಸಂಗೀತವು ರಕ್ತದೊತ್ತಡವನ್ನು ಹತೋಟೆಗೆ ತರುವ ಶಕ್ತಿಯನ್ನು ಹೊಂದಿರುವುದರಿಂದ ರಕ್ತದೊತ್ತಡ ಸಮಸ್ಯೆ ಇರುವವರು ಹಾಗೂ ಹೃದಯ ಸಂಬಂಧಿ ತೊಂದರೆ ಇರುವವರು ಶೀಘ್ರವಾಗಿ ಗುಣಮುಖ ಹೊಂದಲು ಇದು ಸಹಾಯಕಾರಿಯಾಗಿದೆ.
*ಮಧುರವಾದ ಸಂಗೀತವನ್ನು ಕೇಳುವ ಮೂಲಕ ಉತ್ತಮ ನಿದ್ದೆಯನ್ನು ಮಾಡಬಹುದು ಹಾಗಾಗಿ ಇದು ನಿದ್ದೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಾಯಕಾರಿ.
* ಸಂಗೀತವು ಸಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿರುವುದರಿಂದ ನೋವಿನ ಅಥವಾ ಒತ್ತಡದ ಸಂದರ್ಭಗಳಲ್ಲಿಯೂ ನಾವು ಸಂಗೀತವನ್ನು ಆಲಿಸುವುದರಿಂದ ನಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.
* ಕೆಲವು ಸಂದರ್ಭಗಳಲ್ಲಿ, ಆರೋಗ್ಯದ ಮೇಲೆ ಸಂಗೀತದ ಧನಾತ್ಮಕ ಪರಿಣಾಮಗಳು ಔಷಧಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂದು ವೈದ್ಯರು ಹೇಳುತ್ತಾರೆ.
* ವ್ಯಾಯಾಮದ ನಂತರ ಸಂಗೀತವನ್ನು ಆಲಿಸುವುದರಿಂದ ದೇಹವು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದು ಇತ್ತೀಚಿನ ವಾದ, ಅದಕ್ಕಾಗಿಯೇ ಯೋಗ, ಜಿಮ್ ತರಬೇತಿ ಕೇಂದ್ರಗಳಲ್ಲಿ ಸಂಗೀತವನ್ನು ಹಾಕಿರುವುದನ್ನು ನಾವು ನೋಡಬಹುದು.
* ಸಂಗೀತವು ಪೂರ್ವ-ಶಸ್ತ್ರಚಿಕಿತ್ಸೆಗೆ ಸಹಾಯಕವಾಗುವುದು ಮಾತ್ರವಲ್ಲ. ತೆರೆದ ಹೃದಯ ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆಯ ನಂತರ ಹಾಸಿಗೆಯಲ್ಲಿ ವಿಶ್ರಾಂತಿ ಮಾಡುವಾಗ ಸಂಗೀತವನ್ನು ಕೇಳಿದರೆ ಸಂಗೀತವು ರೋಗಿಗಳಿಗೆ ವಿಶ್ರಾಂತಿ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡಿ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಒಟ್ಟಿನಲ್ಲಿ ಸಂಗೀತವು ನಮ್ಮೊಳಗೆ ಜೀವಾಮೃತದಂತೆ ಕೆಲಸಮಾಡುವುದು ಅಷ್ಟೇ ಅಲ್ಲ ನಮ್ಮ ದಿನನಿತ್ಯದ ಒತ್ತಡರಹಿತ ಜೀವನ ನಡೆಸಲು ಒಂದು ವರದಾನ ಎಂದು ಹೇಳಿದರೆ ತಪ್ಪಾಗಲಾರದು.