ಜಾಗಿಂಗ್ ಜಾಗಿಂಗ್ !!! ಆರೋಗ್ಯದ ಮೇಲೆ ಪರಿಣಾಮಗಳೇನು?

ಶುಕ್ರವಾರ, 17 ಆಗಸ್ಟ್ 2018 (16:11 IST)
ಜಾಗಿಂಗ್ ಮಾಡುವುದು ಒಂದು ರೀತಿಯ ಸಂಪೂರ್ಣವಾದ ವ್ಯಾಯಾಮ ಎಂದು ಹೇಳಬಹುದು. ಇದು ಒಂದು ತರಹದ ಕ್ರೀಡೆಯೂ ಹೌದು. ದಿನನಿತ್ಯದ ಜಂಜಾಟಗಳ ನಡುವೆ ನಾವು ಜಾಗಿಂಗ್‌ ಅನ್ನು ಅಭ್ಯಾಸ ಮಾಡಿಕೊಂಡರೆ ಮನಸ್ಸನ್ನು ಸ್ವಲ್ಪ ಮಟ್ಟಿಗೆ ಉಲ್ಲಾಸದಿಂದ ಇಟ್ಟುಕೊಳ್ಳಬಹುದು. ಇದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ.

ಇತ್ತೀಚೆಗೆ ಯುವಜನತೆಯು ಜನರ ಆರೋಗ್ಯದ ಹಿತಾಸಕ್ತಿಗಾಗಿ ಮತ್ತು ಮನೋರಂಜನೆಗೂ ಸಹ   ಮ್ಯಾರ್‌ಥಾನ್‌‌ನಂತಹ ಗೇಮ್‌ಗಳನ್ನು ಆಯೋಜಿಸುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಜಾಗಿಂಗ್‌ನಿಂದ ಹಲವಾರು ಆರೋಗ್ಯದ ಪ್ರಯೋಜನಗಳಿವೆ. ಅವುಗಳ ಬಗ್ಗೆ ತಿಳಿಯುವ ಮೊದಲು ಜಾಗಿಂಗ್‌ ಬಗ್ಗೆ ತಿಳಿದುಕೊಳ್ಳೋಣ.
 
** ಜಾಗಿಂಗ್‌ನ್ನು ಯಾವ ಸಮಯದಲ್ಲಿ ಮಾಡಿದರೆ ಉತ್ತಮ?
 
ಸಾಮಾನ್ಯವಾಗಿ ಜಾಗಿಂಗ್‌ಗೆ ಬೆಳಗಿನ ಸಮಯದಲ್ಲಿ ಹೋಗುವುದನ್ನು ಕಾಣುತ್ತೇವೆ. ಬೆಳಗಿನ ಅವಧಿಯಲ್ಲಿ ವಾತಾವರಣವು ಕಲುಷಿತವಾಗಿರದೇ ಶುಭ್ರವಾದ ಹವಾಮಾನ, ತಂಪಾದ ಗಾಳಿ, ಹಿತಕರವಾಗಿ ಕೇಳಿಸುವ ಹಕ್ಕಿಗಳ ಕಲರವ, ಆಗ ತಾನೇ ಭೂಮಿಗೆ  ಬೀಳುವ ಸೂರ್ಯನ ರಶ್ಮಿ, ನಿಶ್ಯಬ್ದವಾದ ವಾತಾವರಣವು ಇರುತ್ತದೆ. ಈ ಸಮಯದಲ್ಲಿ ಜಾಗಿಂಗ್ ಮಾಡಿದರೆ ಮನಸ್ಸೂ ಕೂಡಾ ಉಲ್ಲಾಸಿತವಾಗಿರುತ್ತದೆ. ಅದರಲ್ಲೂ ಬೆಳಗ್ಗೆ 6 ಗಂಟೆಯಿಂದ 7 ಗಂಟೆಯು ಜಾಗಿಂಗ್‌ಗೆ ಉತ್ತಮವಾದ ಸಮಯ ಎಂದು ಹೇಳಬಹುದು.
 
** ಆರೋಗ್ಯದ ಮೇಲೆ ಹೇಗೆ ಪರಿಣಾಮ?
 
1. ನಿದ್ರಾಹೀನತೆಯನ್ನು ಹೋಗಲಾಡಿಸಲು:
 
    ದೇಹಕ್ಕೆ ವ್ಯಾಯಾಮವಿಲ್ಲದೇ, ಶ್ರಮವಿಲ್ಲದೇ ಕೂತಲ್ಲಿಯೇ ಎಲ್ಲ ಕೆಲಸ ಆಗುವ ಈ ವಿದ್ಯಮಾನದಲ್ಲಿ ನಿದ್ರಾಹೀನತೆಯಂತಹ ಸಮಸ್ಯೆಯು ಸಾಮಾನ್ಯವಾಗಿದೆ. ಆದರೆ ಜಾಗಿಂಗ್‌ನಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ಜಾಗಿಂಗ್ ಮಾಡುವುದರಿಂದ ದೇಹಕ್ಕೆ ಸಂಪೂರ್ಣವಾದ ವ್ಯಾಯಾಮ ಸಿಗುತ್ತದೆ ಮತ್ತು ಒತ್ತಡರಹಿತವಾಗಿ ನಿದ್ರಿಸಬಹುದು.
 
2. ತೂಕನಷ್ಟಕ್ಕೆ ಸಹಾಯಕಾರಿ:
 
 ದೇಹದ ಕ್ಯಾಲೋರಿಯನ್ನು ಕಡಿಮೆಗೊಳಿಸಲು ಜಾಗಿಂಗ್ ನೆರವಾಗುತ್ತದೆ. ಜಾಗಿಂಗ್ ಮಾಡುವುದರಿಂದ ದೇಹದಲ್ಲಿ ಸಂಗ್ರಹವಾದ ಅಧಿಕವಾದ ಬೊಜ್ಜು, ಕೊಬ್ಬು ಕಡಿಮೆಯಾಗುತ್ತದೆ. ಇದರಿಂದ ತೂಕವನ್ನು ಕಳೆದುಕೊಳ್ಳಲು ಸಹಾಯಕವಾಗಿದೆ.
 
3. ಸ್ನಾಯುಗಳನ್ನು ಬಲಪಡಿಸುವಲ್ಲಿ ಸಹಾಯಕಾರಿಯಾಗಿದೆ:
 
 ಮೂಳೆಗಳು ಮತ್ತು ಸ್ನಾಯುಗಳು ಜಾಗಿಂಗ್ ಮಾಡುವುದರಿಂದ ಬಲಗೊಳ್ಳುತ್ತವೆ. ಜಾಗಿಂಗ್‌ ಮಾಡುವುದರಿಂದ ದೇಹದ ಎಲ್ಲಾ ಭಾಗಗಳಿಗೆ ವ್ಯಾಯಾಮ ಆಗುವುದರಿಂದ ಮೂಳೆಗಳು ಬೆಳೆಯಲೂ ಮತ್ತು ಸಶಕ್ತವಾಗಲೂ ಸಹ ಇದು ಕಾರಣ ಎಂದು ಹೇಳಬಹುದು.
 
4. ಮಾನಸಿಕ ಆರೋಗ್ಯದ ಸುಧಾರಣೆಗೆ:
 
ದೇಹದಲ್ಲಿ ಉತ್ತಮವಾದ ಹಾರ್ಮೋನ್‌ನ್ನು ಬಿಡುಗಡೆ ಮಾಡಲು ಜಾಗಿಂಗ್ ನೆರವಾಗುತ್ತದೆ. ಇದರಿಂದ ಉಲ್ಲಾಸಭರಿತವಾದ ಮನಸ್ಥಿತಿಯನ್ನು ಹೊಂದಲು ಸಾಧ್ಯವಾಗುತ್ತದೆ. ಮತ್ತು ಇಡೀ ದಿನವನ್ನು ಸಂತೋಷಭರಿತವಾಗಿ ಕಳೆಯಲು ಸಾಧ್ಯವಾಗುತ್ತದೆ. 
 
5. ಶ್ವಾಸಕೋಶ ಮತ್ತು ಉಸಿರಾಟದ ವ್ಯವಸ್ಥೆಯನ್ನು ಸರಿಪಡಿಸಲು:
 
ಜಾಗಿಂಗ್ ಮಾಡುವುದರಿಂದ ಉಸಿರಾಟದ ವ್ಯವಸ್ಥೆ ಮತ್ತು ಶ್ವಾಸಕೋಶದ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಜಾಗಿಂಗ್‌ನಿಂದ ಉಸಿರಾಟದ ಸ್ನಾಯುಗಳ ಸಹಿಷ್ಣತೆಯು ಹೆಚ್ಚುತ್ತದೆ. ಅದಲ್ಲದೇ ಆಮ್ಲಜನಕವನ್ನು ಹೀರಿಕೊಳ್ಳುವ ಮತ್ತು ಕಾರ್ಬನ್ ಡೈ ಆಕ್ಸೈಡ್‌ನ್ನು ತೆಗೆದು ಹಾಕುವುದರಲ್ಲಿ ದೇಹದ ಅಂಗಾಂಶಗಳ ದಕ್ಷತೆಯನ್ನು ಸುಧಾರಿಸುವಲ್ಲಿಯೂ ಸಹ ಜಾಗಿಂಗ್ ನೆರವಾಗುತ್ತದೆ.
 
6. ಹೃದಯದ ಆರೋಗ್ಯಕ್ಕಾಗಿ:
 
ಜಾಗಿಂಗ್ ಒಂದು ಸಂಪೂರ್ಣ ವ್ಯಾಯಾಮವಾಗಿರುವುದರಿಂದ ದೇಹದ ಎಲ್ಲಾ ಕ್ರಿಯೆಗಳಿಗೆ ಸಹಾಯಕಾರಿಯಾಗಿದೆ. ಜಾಗಿಂಗ್ ಮಾಡುವುದರಿಂದ ಹಸಿವೆ ಆಗದಿರುವುದು, ಮಲಬದ್ಧತೆ ಹೀಗೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ ಮತ್ತು ಹೃದಯದ ಆರೋಗ್ಯಕ್ಕೂ ಸಹ ಜಾಗಿಂಗ್ ಒಳ್ಳೆಯದು. ಇದರಿಂದ ರಕ್ತ ಪರಿಚಲನೆಯು ಸರಾಗವಾಗಿ ನಡೆಯುತ್ತದೆ. 
 
ಉತ್ತಮ ಹವ್ಯಾಸಗಳಲ್ಲಿ ಜಾಗಿಂಗ್ ಕೂಡಾ ಒಂದು. ಜಾಗಿಂಗ್‌ನಿಂದ ದೈಹಿಕ ಆರೋಗ್ಯವು ಅಷ್ಟೇ ಅಲ್ಲದೇ ಮಾನಸಿಕ ಆರೋಗ್ಯವೂ ಕೂಡಾ ಸುಧಾರಿಸುತ್ತದೆ. ಆದರೆ ಆದಷ್ಟು ಕಲುಷಿತವಲ್ಲದ ಪ್ರದೇಶದಲ್ಲಿ ಜಾಗಿಂಗ್ ಅನ್ನು ಮಾಡುವುದರಿಂದ ಉತ್ತಮವಾದ ಗಾಳಿಯನ್ನು ಸೇವಿಸಬಹುದು ಮತ್ತು ಉತ್ತಮ ವಾತಾವರಣದಲ್ಲಿ ಮಾಡುವುದರಿಂದ ಉತ್ತಮವಾದ ಆರೋಗ್ಯವನ್ನೂ ಸಹ ಹೊಂದಬಹುದಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ