ಕೆಲಸ ಮಾಡುತ್ತಿರುವ ತಾಣದಲ್ಲಿ ನಿಮಗೆ ಕುತ್ತಿಗೆ ನೋವು ಬಾಧಿಸಬಹುದು, ಆದರೆ ಮನೆಯಲ್ಲಿ ಎದ್ದು ಕೆಲಸಕ್ಕೆ ಹೋಗುವುದಿದೆಯಲ್ಲ, ಅದರಿಂದ ನಿಮ್ಮನ್ನು ಕಾಡುವ ಬೆನ್ನುನೋವಿನಿಂದ ಸಮಾಧಾನ ಪಡೆಯಬಹುದು ಎನ್ನುತ್ತದೆ ಸಂಶೋಧನಾ ವರದಿಯೊಂದು.
ಲಂಡನ್‌ನ ವರ್ಕ್ ಫೌಂಡೇಶನ್‌ನ ಸಂಶೋಧಕರು ನಡೆಸಿದ ಅಧ್ಯಯನವು, ಬೆನ್ನುನೋವು ಮತ್ತು ಗಂಟುನೋವು ಪೀಡಿತರು ಕೆಲಸ ಬಿಟ್ಟು ಮನೆಯಲ್ಲೇ ಕೂರುವುದರಿಂದ ದೂರವಿರಬೇಕು ಎಂಬುದನ್ನು ಸೂಚಿಸುತ್ತದೆ.
ಕೆಲಸ ಮಾಡಿದರೆ ಬೆನ್ನುನೋವು ಹೇಗೆ ದೂರವಾಗುತ್ತದೆ? ಕಂಪನಿ ಮತ್ತು ಸಹೋದ್ಯೋಗಿಗಳ ಬೆಂಬಲವು ಆತ್ಮಪ್ರತಿಷ್ಠೆಯನ್ನು ಹೆಚ್ಚಿಸುವುದು ಮಾತ್ರವೇ ಅಲ್ಲ, ಸಾಧನೆ ಮಾಡಿದ ತೃಪ್ತಿಯನ್ನೂ ನೀಡುತ್ತದೆ. ಇದು ತೃಪ್ತಿಯ ಭಾವವು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.
ಸ್ನಾಯು-ಮೂಳೆ ಸಂಬಂಧಿತ ಹಲವಾರು ಸಮಸ್ಯೆಗಳಿಗೆ ಕೆಲಸವು ಕಾರಣವೂ ಆಗಬಹುದು, ಚಿಕಿತ್ಸೆಯೂ ಆಗಬಹುದು ಎನ್ನುತ್ತಾರೆ ಈ ಪ್ರತಿಷ್ಠಾನದ ಸಂಶೋಧಕ ಮೈಕೆಲ್ ಮಾಡನ್, "ಅದು ಸ್ನಾಯು-ಅಸ್ಥಿ ಸಂಬಂಧಿತ ರೋಗಲಕ್ಷಣಗಳನ್ನು ಹೆಚ್ಚಿಸಬಹುದು. ಆದರೆ ಸೂಕ್ತವಾದ ಬೆಂಬಲದ ವ್ಯವಸ್ಥೆಯಿದ್ದರೆ, ಉದ್ಯೋಗದ ತಾಣವು ಕೂಡ ಚೇತರಿಕೆಗೆ ಪೂರಕವಾಗಬಲ್ಲದು" ಎಂದು ಮೈಕೆಲ್ ಮಾಡನ್ ಹೇಳಿರುವುದನ್ನು ಉಲ್ಲೇಖಿಸಿ ಡೈಲಿ ಮೇಲ್ ವರದಿ ಮಾಡಿದೆ.
ಹಾಗಿದ್ದರೆ ಇನ್ನು ಮುಂದೆ ಸೋಮಾರಿಯಾಗಿ ಮನೆಯಲ್ಲಿ ಕೂರುವುದು ಸರಿಯಲ್ಲ. ಇರುವ ಬೆನ್ನುನೋವು ಹೆಚ್ಚಾದೀತು, ಇಲ್ಲದ ಬೆನ್ನುನೋವು ಬರಲೂ ಬಹುದು.