ಬೆಂಗಳೂರು: ಹಸಿರು, ಆರೆಂಜ್ ವಲಯಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ರಾಜ್ಯ ಸರ್ಕಾರ ಕೊಂಚ ಸಡಿಲಗೊಳಿಸಿರುವ ಕುರಿತಂತೆ ರೂಮರ್ಸ್ ಗಳು ಹಬ್ಬಿಕೊಂಡಿದ್ದು, ಇದರಿಂದ ಜನರು ಗೊಂದಲಕ್ಕೆ ಬೀಳುವಂತಾಗಿದೆ.
ಸೋಮವಾರದಿಂದ ಬಸ್ ಸಂಚಾರವಾಗಲಿದೆ ಎಂಬ ಸುದ್ದಿ, ಕಚೇರಿ ತೆರೆಯುವ ಬಗ್ಗೆ, ಸಾರ್ವಜನಿಕ ಪ್ರದೇಶದಲ್ಲಿ ಓಡಾಡುವ ಬಗ್ಗೆ ಹಲವು ಊಹಾಪೋಹಗಳು ಹಬ್ಬಿದ್ದು, ಜನರು ಯಾವ ಸುದ್ದಿ ನಂಬಬೇಕು, ಬಿಡಬೇಕು ಎನ್ನುವ ಗೊಂದಲಕ್ಕೆ ಬಿದ್ದಿದ್ದಾರೆ.
ಅಸಲಿಗೆ ರಾಜ್ಯ ಸರ್ಕಾರ ಹಸಿರುವ ವಲಯದಲ್ಲಿ ಶೇ. 50 ರಷ್ಟು ಬಸ್ ಸಂಚಾರಕ್ಕೆ ಮಾತ್ರ ಅವಕಾಶ ನೀಡಿದೆ. ಅಲ್ಲದೆ, ಆರೆಂಜ್, ರೆಡ್ ಝೋನ್ ಗಳಲ್ಲಿ ಬಸ್ ಸಂಚಾರಕ್ಕೆ ಅನುಮತಿ ನೀಡಿಲ್ಲ. ಖಾಸಗಿ ಕಂಪನಿಗಳಿಗೂ ಶೇ. 33 ರಷ್ಟು ಸಿಬ್ಬಂದಿಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸಲು ಮಾತ್ರ ಅವಕಾಶ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ಓಡಾಡಲು ಎಲ್ಲಿಯೂ ಅವಕಾಶ ನೀಡಲಾಗಿಲ್ಲ. ಲಾಕ್ ಡೌನ್ ಸಡಿಲಗೊಂಡಿದೆಯೆಂದು ಬೇಕಾಬಿಟ್ಟಿ ಓಡಾಡುವಂತಿಲ್ಲ. ಸಾಮಾಜಿಕ ಅಂತರ, ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳಲೇಬೇಕು. ಇಲ್ಲಸಲ್ಲದ ಗಾಳಿ ಮಾತುಗಳಿಗೆ ಕಿವಿಗೊಟ್ಟು ಸುರಕ್ಷತೆ ಮರೆಯಬೇಡಿ.