ಹೈಪೋಥೈರಾಯಿಡ್: ಹೆಚ್ಚಿರುವ ದೇಹದ ತೂಕವನ್ನು ಹೀಗೆ ಇಳಿಸಿಕೊಳ್ಳಿ.
ಸೋಮವಾರ, 18 ಮಾರ್ಚ್ 2019 (16:26 IST)
ಥೈರಾಯಿಡ್ ಗ್ರಂಥಿ ಗಂಟಲಿನ ಭಾಗದಲ್ಲಿ ಒಂದು ಚಿಟ್ಟೆಯ ಆಕಾರದಲ್ಲಿ ಇರುತ್ತದೆ. ಈ ಗ್ರಂಥಿಯು ಪಿಟ್ಯುಟರಿ ಗ್ರಂಥಿಯ ಅಧೀನದಲ್ಲಿರುತ್ತದೆ. ಥೈರಾಯಿಡ್ ಸಮಸ್ಯೆಯಲ್ಲಿ ಎರಡು ವಿಧಗಳಿದ್ದು ಟಿ3, ಟಿ4 ಹಾರ್ಮೋನ್ ಕಡಿಮೆಯಾಗುವುದರಿಂದ ಉಂಟಾಗುವ ಸಮಸ್ಯೆಗೆ ಹೈಪೋಥೈರಾಯಿಡಿಸಮ್ ಎನ್ನುತ್ತಾರೆ ಮತ್ತು ಟಿ3, ಟಿ4 ಹೆಚ್ಚಾಗುವುದರಿಂದ ಉಂಟಾಗುವ ಸಮಸ್ಯೆಗೆ ಹೈಪರ್ ಥೈರಾಯಿಡಿಸಮ್ ಎನ್ನುತ್ತಾರೆ.
ಥೈರಾಯಿಡ್ ಗ್ರಂಥಿ ಜೀವಕ್ರಿಯೆಗಳಿಗೆ ಪ್ರಮುಖವಾದ ಮತ್ತು ಅವಶ್ಯಕವಾದ ಗಂಥಿಯಾಗಿದ್ದು ಅದು ಸರಿಯಾಗಿ ಕಾರ್ಯ ನಿರ್ವಹಿಸದಿರುವಾಗ ಶರೀರದಲ್ಲಿ ಮುಖ್ಯವಾದ ಭಾಗಗಳ ಮೇಲೆ ಅಡ್ಡಪರಿಣಾಮವನ್ನು ಬೀರುತ್ತದೆ. ಆದರೆ ಈ ರೋಗದ ವಿಶಿಷ್ಟತೆಯೆಂದರೆ ಈ ಸಮಸ್ಯೆಯಿರುವ ಜನರಿಗೆ ವಿಷಯವೇ ತಿಳಿದಿರುವುದಿಲ್ಲ.
ಆಹಾರ ಸೇವನೆಯಲ್ಲಿ ವ್ಯತ್ಯಾಸವಿಲ್ಲದೇ ಶೀಘ್ರವಾಗಿ ತೂಕದಲ್ಲಿನ ಹೆಚ್ಚಳಕ್ಕೆ ಬಹುತೇಕ ಥೈರಾಯಿಡ್ ಸಮಸ್ಯೆಯೇ ಕಾರಣವಾಗಿರುತ್ತದೆ. ಹೈಪೋಥೈರಾಯಿಡಿಸಮ್‌ನಲ್ಲಿ ಮಾನಸಿಕ ಆಂದೋಲನಗಳೂ ಸಹ ಹೆಚ್ಚಾಗಿ ಕಂಡುಬರುತ್ತವೆ. ಈ ಸಮಸ್ಯೆಯನ್ನು ಕಂಡುಹಿಡಿಯುವಲ್ಲಿ ವಿಳಂಬವಾದರೆ ಸ್ಥೂಲಕಾಯದ ಜೊತೆಗೆ ಹೃದಯ ರೋಗಗಳು ಮತ್ತು ಕೂದಲು ಉದುರುವುದು, ಬಂಜೆತನ ಮತ್ತು ಲೈಂಗಿಕ ಸಮಸ್ಯೆಗಳೂ ಸಹ ಉಂಟಾಗುತ್ತವೆ. ಪ್ರಪಂಚದಲ್ಲಿ ಸುಮಾರು ಶೇಕಡಾ 7.5 ರಷ್ಟು ಸ್ತ್ರೀಯರು ಇಂದು ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದು ಇದು ಪುರುಷರಲ್ಲಿ ಕೇವಲ ಶೇಕಡಾ 1.5 ರಷ್ಟು ಮಾತ್ರ ಕಂಡುಬಂದಿದೆ. ಈ ಸಮಸ್ಯೆಗೆ ಮೂಲ ಕಾರಣ ಅಸಮರ್ಪಕ ಜೀವನಶೈಲಿ ಮತ್ತು ಮಾನಸಿಕ ಒತ್ತಡ ಎಂದು ಗುರುತಿಸಲಾಗಿದೆ.
ನೀವು ಹೈಪೋಥೈರಾಯಿಡಿಸಮ್ ನಿಂದ ಬಳಲುತ್ತಿದ್ದು ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸಿದರೆ ಈ ಕೆಲವೊಂದು ಸಲಹೆಗಳನ್ನು ಅನುಸರಿಸಿ ನಿಮ್ಮ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ.
* ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಿರಿ
ಉತ್ತಮ ಆರೋಗ್ಯಕ್ಕೆ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವಿಕೆಯು ಸುಲಭವಾದ ಮಾರ್ಗವಾಗಿದೆ. ಇದು ಅಂಡರ್ ಆಕ್ಟಿವ್ ಥೈರಾಯಿಡ್ ಸಮಸ್ಯೆಯಿಂದ ಹೆಚ್ಚಾದ ತೂಕವನ್ನು ಕಳೆದುಕೊಳ್ಳಲೂ ಸಹಾಯ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸಿ ತೂಕ ಕಳೆದುಕೊಳ್ಳಲು ಸಹಾಯಕಾರಿಯಾಗಿದೆ. ಹೆಚ್ಚಿನ ನೀರನ್ನು ಕುಡಿಯುವಿಕೆಯು ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯ ಮೇಲೆ ಪರಿಮಾಮವನ್ನು ಬೀರುತ್ತದೆ.
* ಸರಿಯಾದ ಸಮಯದಲ್ಲಿ ಔಷಧವನ್ನು ಸೇವಿಸುವಿಕೆ
ದೇಹದಲ್ಲಿ ಥೈರಾಯಿಡ್ ಮಟ್ಟವನ್ನು ನಿಯಂತ್ರಣದಲ್ಲಿಡಲು ವೈದ್ಯರು ನಿಮಗೆ ಔಷಧವನ್ನು ನೀಡುತ್ತಾರೆ. ನೀವು ಯಶಸ್ವಿಯಾಗಿ ಅದರ ಉಪಯೋಗವನ್ನು ಪಡೆಯಲು ವೈದ್ಯರು ಸೂಚಿಸಿರುವ ಎಲ್ಲಾ ಔಷಧಗಳನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಬೇಕು ಮತ್ತು ಅವರು ಸೂಚಿಸಿರುವ ಆಹಾರ ಕ್ರಮವನ್ನು ತಪ್ಪದೇ ಅನುಸರಿಸಬೇಕು.
*ನಿಯಮಿತವಾದ ವ್ಯಾಯಾಮ
ಕೇವಲ ಆಹಾರದಲ್ಲಿನ ಪಥ್ಯದಿಂದಾಗಿ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮಗೆ ಉತ್ತಮವಾದ ಪರಿಣಾಮದ ಅಗತ್ಯವಿದ್ದರೆ ನೀವು ನಿಯಮಿತ ವ್ಯಾಯಾಮವನ್ನೂ ಸಹ ಮಾಡಬೇಕು. ದಿನನಿತ್ಯ ನೀವು ಯಾವುದಾದರೂ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ನೀವು ಕೊಬ್ಬನ್ನು ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಕರಗಿಸಲು ಸಹಾಯ ಮಾಡುತ್ತದೆ.
* ಗ್ಲುಟೆನ್ ಮುಕ್ತ ಆಹಾರವನ್ನು ಸೇವಿಸಿ
ಗ್ಲುಟೆನ್ ಥೈರಾಯಿಡ್‌ನ ಕಾರ್ಯನಿರ್ವಹಣೆಯ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ. ನೀವು ಹೈಪೋಥೈರಾಯಿಡಿಸಮ್ ನಿಂದ ಬಳಲುತ್ತಿದ್ದರೆ ಗ್ಲುಟೆನ್ ಪ್ರಮಾಣವನ್ನು ಕಡಿಮೆ ಸೇವಿಸುವಿಕೆಯು ನಿಮಗೆ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
*ಆಹಾರವನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿ
ನೀವು ಒಮ್ಮೆಗೆ ಹೆಚ್ಚಿನ ಆಹಾರವನ್ನು ಸೇವಿಸುವ ಬದಲಿಗೆ ಅದನ್ನು 2-3 ಭಾಗವನ್ನಾಗಿ ಮಾಡಿ ಆಗಾಗ ಸೇವಿಸಬೇಕು. ನೀವು ಸೇವಿಸುವ ಆಹಾರದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಿ. ಆಹಾರದಲ್ಲಿನ ಸಕ್ಕರೆಯ ಪ್ರಮಾಣವನ್ನು ಮತ್ತು ಸಂಸ್ಕರಿತ ಆಹಾರವನ್ನು ಆದಷ್ಟು ಕಡಿಮೆ ಮಾಡಿ.
*ರಾತ್ರಿ ಊಟದ ನಂತರ ಕನಿಷ್ಟ 1 ಮೈಲಿಯಷ್ಟು ನಡೆದಾಡಿ. ರಾತ್ರಿ ಅಥವಾ ಮಧ್ಯಾಹ್ನ ಊಟವಾದ ತಕ್ಷಣ ಮಲಗ ಬೇಡಿ. ಊಟ ಮತ್ತು ನಿದ್ದೆಯ ನಡುವೆ ಕನಿಷ್ಟ 1-2 ಗಂಟೆಗಳ ಅಂತರವಿರಲಿ.