ಕುಂಬಳಕಾಯಿ ಒಂದು ತರಕಾರಿ ಮಾತ್ರವಲ್ಲ, ದೇಹಕ್ಕೆ ಪೌಷ್ಟಿಕಾಂಶದ ಜೊತೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದು ಕಡಿಮೆ ಕ್ಯಾಲೋರಿ ಹೊಂದಿದ್ದು, ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಬಹುದು. ಇದರಲ್ಲಿ ಜೀವ ಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ಬೀಟಾ ಕ್ಯಾರೋಟಿನ್ ನ ಅತ್ಯುತ್ತಮವಾದ ಮೂಲಗಳು ಸೇರಿದಂತೆ ಅದ್ಭುತವಾದ ಪ್ರಯೋಜನಗಳನ್ನು ಹೊಂದಿದೆ.
ಕಣ್ಣಿನ ದೃಷ್ಟಿ
ಮುಖ್ಯವಾಗಿ ಕ್ಯಾರೆಟ್, ಸಿಹಿ ಗೆಣಸು, ಕುಂಬಳಕಾಯಿಗಳು ಬೀಟಾ ಕ್ಯಾರೋಟಿನ್ ನಲ್ಲಿ ಸಮೃದ್ಧವಾಗಿದೆ. ಇದು ಸೂಕ್ಷ್ಮಜೀವಿಗಳನ್ನು ನಾಶ ಮಾಡಲು ಹಾಗು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಪ್ರತಿನಿತ್ಯ ನಿಯಮಿತವಾಗಿ ಕುಂಬಳಕಾಯಿಯನ್ನು ಸೇವನೆ ಮಾಡುವುದರಿಂದ ನಿಮ್ಮ ದೃಷ್ಟಿಯಲ್ಲಿನ ತೊಂದರೆಗಳು ಕಡಿಮೆಯಾಗುತ್ತದೆ. ಇದರಲ್ಲಿನ ವಿಟಮಿನ್ ಎ ಆರೋಗ್ಯಕರವಾದ ಕಣ್ಣುಗಳನ್ನು ಹೊಂದಲು ಹಾಗು ಸ್ಪಷ್ಟವಾಗಿ ನೋಡಲು ಸಹಾಯ ಮಾಡುತ್ತದೆ.
ರೋಗ ನಿರೋಧಕ ಶಕ್ತಿ
ಇದರಲ್ಲಿನ ಬೀಟಾ ಕ್ಯಾರೋಟಿನ್, ಕುಂಬಳಕಾಯಿಗಳು ವಿಟಮಿನ್ ಸಿ, ವಿಟಮಿನ್ ಇ, ಕಬ್ಬಿಣವನ್ನು ಹೊಂದಿದೆ. ಇದರಿಂದಾಗಿ, ನಿಮ್ಮ ಆಹಾರದಲ್ಲಿ ಹೆಚ್ಚು ಕುಂಬಳಕಾಯಿಯನ್ನು ಸೇರಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ಕೆಲವು ಭಾಗಗಳಲ್ಲಿ ಕಾಣಿಸುವ ಗಾಯಗಳನ್ನು ಗುಣಪಡಿಸುವಿಕೆಯನ್ನು ವೇಗಗೊಳಿಸುತ್ತದೆ.
ಕುಂಬಳಕಾಯಿಯಲ್ಲಿನ ವಿಟಮಿನ್ ಎ, ಶ್ವಾಸಕೋಶದಂತಹ ಹಲವು ರೀತಿಯ ಕ್ಯಾನ್ಸರ್ ಅಪಾಯಗಳಿಂದ ರಕ್ಷಿಸುತ್ತದೆ. ಕೆಲವು ಅಧ್ಯಯನದ ಪ್ರಕಾರ ವಿಟಮಿನ್ ಎ ಹೊಂದಿರುವ ಆಹಾರವನ್ನು ಹೆಚ್ಚು ಸೇವಿಸಿದಾಗ ಇಂತಹ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಚರ್ಮದ ಕಾಂತಿ
ಕುಂಬಳಕಾಯಿಯಲ್ಲಿನ ಬೀಟಾ ಕ್ಯಾರೋಟಿನ್ ಉತ್ಕರ್ಷಣ ನಿರೋಧಕ ಶಕ್ತಿಯು ಚರ್ಮವನ್ನು ಪೋಷಣೆ ಮಾಡುತ್ತದೆ. ಇದು ಚರ್ಮವು ವಯಸ್ಸಾಗುವಿಕೆಯನ್ನು ತಡೆಯುವುದಲ್ಲದೇ, ಚರ್ಮವು ನಳನಳಿಸುವಂತೆ ಮಾಡುತ್ತದೆ. ಕುಂಬಳಕಾಯಿಯ ಸೇವನೆಯಿಂದ ಉರಿಯೂತದಂತಹ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಚರ್ಮದ ಸಮಸ್ಯೆಗಳಿಂದ ಉಂಟಾಗುವ ಕಿರಿಕಿರಿಯನ್ನು ತಪ್ಪಿಸುತ್ತದೆ.
ಮಧುಮೇಹ
ಕುಂಬಳಕಾಯಿಯಲ್ಲಿನ ಪೊಟ್ಯಾಷಿಯಂ ಮಟ್ಟವು, ಪಾರ್ಶ್ವವಾಯು ಲಕ್ಷಣಗಳು, ಮೂತ್ರಪಿಂಡದ ಕಲ್ಲುಗಳು ಮತ್ತು ಟೈಪ್ ೨ ಮಧುಮೇಹದಂತಹ ಅಪಾಯದಿಂದ ಪಾರು ಮಾಡುತ್ತದೆ. ಇದು ಬಲಿಷ್ಠವಾದ ಮೂಳೆಯನ್ನು ಪಡೆಯಲು ಕೂಡ ಸಹಾಯ ಮಾಡುತ್ತದೆ. ಮಧುಮೇಹ ಹೊಂದಿರುವವರು ನಿಯಮಿಯವಾಗಿ ಕುಂಬಳಕಾಯಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು.
ತೂಕ ಇಳಿಕೆ
ಕುಂಬಳಕಾಯಿಯಲ್ಲಿ ಫೈಬರ್ ಹೆಚ್ಚಾಗಿದ್ದು, ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಕುಂಬಳಕಾಯಿಯಲ್ಲಿ ಯಥೇಚ್ಚವಾಗಿ ನೀರಿನ ಅಂಶವಿರುವುದರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಇದರಿಂದ ಮತ್ತೆ ಮತ್ತೆ ತಿನ್ನಬೇಕು ಎಂಬ ಬಯಕೆ ಕಡಿಮೆಯಾಗುತ್ತದೆ. ಹಾಗಾಗಿ, ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಕುಂಬಳಕಾಯಿ ಸೇರಿಸುವುದರಿಂದ ತೂಕ ಸುಲಭವಾಗಿ ಇಳಿಸಿಕೊಳ್ಳಬಹುದು.