ಸರಿಯಾಗಿ ನಿದ್ದೆ ಬರುತ್ತಿಲ್ಲವಾ? ಈ ಸಣ್ಣ ಬದಲಾವಣೆ ಮಾಡಿ ನೋಡಿ!

ಶನಿವಾರ, 4 ಸೆಪ್ಟಂಬರ್ 2021 (12:40 IST)
Vaastu Tips: ವಾಸ್ತು ಶಾಸ್ತ್ರ ಮಲಗುವ ಕೋಣೆ ನಿರ್ಮಾಣಕ್ಕೆ ಮಾತ್ರ ಎಂದುಕೊಂಡವರು ಅದು ಇಡೀ ಬದುಕಿನೊಂದಿಗೆ ಬೆಸೆದುಕೊಂಡಿದೆ ಎನ್ನುವುದನ್ನು ಅರಿತಿರುವುದಿಲ್ಲ. ಹಾಗಿದ್ರೆ ಉತ್ತಮ ನಿದ್ದೆಗೂ ವಾಸ್ತು ಶಾಸ್ತ್ರಕ್ಕೂ ಏನು ಸಂಬಂಧ? ವಾಸ್ತು ಪ್ರಕಾರ ಹೇಗೆ ಯಾವಾಗ ಮಲಗಿದ್ರೆ ನಿದ್ರಾದೇವಿ ನಮಗೆ ಕೃಪೆ ತೋರುತ್ತಾಳೆ? ನಿದ್ದೆಯ ಸಮಸ್ಯೆ ಇರುವ ಎಲ್ಲರೂ ತಿಳಿದಿರಲೇಬೇಕಾದ ವಿಚಾರಗಳಿವು.

ಇಡೀ ದಿನ ಏನು ಸರಿ ಆಗದಿದ್ರೂ ಪರ್ವಾಗಿಲ್ಲ, ರಾತ್ರಿ ದಿಂಬಿಗೆ ತಲೆ ಇಟ್ಟ ಕೂಡಲೇ ನಿದ್ದೆಯೊಂದು ಚೆನ್ನಾಗಿ ಬಂದುಬಿಟ್ರೆ ಅದಕ್ಕಿಂತ ಸುಖ ಇನ್ನೊಂದಿಲ್ಲ. ಆದ್ರೆ ನಿದ್ದೆ ಬಗ್ಗೆ ಹೆಚ್ಚು ಜನ ಸರಿಯಾಗಿ ಗಮನ ಹರಿಸೋದೇ ಇಲ್ಲ. ಇಡೀ ದಿನ ದುಡಿದ ದೇಹಕ್ಕೆ ಆಯಾಸವಾಗಿರುತ್ತೆ. ನಿದ್ದೆ ಸರಿಯಾಗಿ ಆದರೆ ಮಾತ್ರ ಮುಂದಿನ ದಿನ ಮತ್ತೆ ಹೊಸಾ ಹುರುಪಿನೊಂದಿಗೆ ಕೆಲಸ ಮಾಡಲು ಸಾಧ್ಯ. ಆದ್ರೆ ಅದೇನೇ ಮಾಡಿದ್ರೂ ಕೆಲವರಿಗೆ ಕಣ್ತುಂಬಾ ನಿದ್ದೆ ಮಾಡೋದು ಮರೀಚಿಕೆಯೇ ಆಗಿಬಿಟ್ಟಿರುತ್ತದೆ. ಒಳ್ಳೆ ನಿದ್ದೆ ಬರಬೇಕು ಅಂದ್ರೆ ಮಲಗುವ ವಾಸ್ತು ಸರಿ ಇರಬೇಕಂತೆ, ಹಾಗೆನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ವಾಸ್ತು ಶಾಸ್ತ್ರ ಮಲಗುವ ಕೋಣೆ ನಿರ್ಮಾಣಕ್ಕೆ ಮಾತ್ರ ಎಂದುಕೊಂಡವರು ಅದು ಇಡೀ ಬದುಕಿನೊಂದಿಗೆ ಬೆಸೆದುಕೊಂಡಿದೆ ಎನ್ನುವುದನ್ನು ಅರಿತಿರುವುದಿಲ್ಲ. ಹಾಗಿದ್ರೆ ಉತ್ತಮ ನಿದ್ದೆಗೂ ವಾಸ್ತು ಶಾಸ್ತ್ರಕ್ಕೂ ಏನು ಸಂಬಂಧ? ವಾಸ್ತು ಪ್ರಕಾರ ಹೇಗೆ ಯಾವಾಗ ಮಲಗಿದ್ರೆ ನಿದ್ರಾದೇವಿ ನಮಗೆ ಕೃಪೆ ತೋರುತ್ತಾಳೆ? ನಿದ್ದೆಯ ಸಮಸ್ಯೆ ಇರುವ ಎಲ್ಲರೂ ತಿಳಿದಿರಲೇಬೇಕಾದ ವಿಚಾರಗಳಿವು.

ನಿಮ್ಮ ಮನೆಯ ವಾಸ್ತು ಕೂಡಾ ನಿಮ್ಮ ನಿದ್ದೆಯ ಮೇಲೆ ಪರಿಣಾಮ ಬೀರಬಲ್ಲದು ಎನ್ನುವುದನ್ನು ಬಹುಶಃ ನೀವು ಅಂದುಕೊಂಡಿರಲೂ ಸಾಧ್ಯವಿಲ್ಲ. ಆದ್ರೆ ಇದು ಸತ್ಯವಾದ ವಿಚಾರ. ಇದನ್ನು ಸರಿಯಾಗಿ ಅರಿತು ಒಂದಷ್ಟು ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡರೆ ಆಗ ಒಳ್ಳೆ ನಿದ್ದೆ ಕೂಡಾ ನಿಮ್ಮದಾಗುತ್ತದೆ. ಭಾರತೀಯ ಪುರಾತನ ಶಾಸ್ತ್ರವಾದ ವಾಸ್ತು ನಮ್ಮ ದೈನಂದಿನ ಬದುಕಿನ ಮೇಲೂ ಬಹಳ ಪ್ರಭಾವ ಬೀರುತ್ತದೆ. ನೀವು ಗಮನಿಸಿದ್ದೀರಾ? ಕೆಲವು ಸ್ಥಳಗಳಲ್ಲಿ ಕುಳಿತರೆ ನಿಮಗೆ ಏನೋ ಇರಿಸುಮುರುಸಿನ ಅನುಭವವಾಗುತ್ತದೆ, ಅಥವಾ ಕಿರಿಕಿರಿ ಎನಿಸುತ್ತದೆ? ಅಥವಾ ಕೆಲವು ಕಡೆ ಸುಮ್ಮನೆ ಕೂತರೂ ಸಾಕು, ಅದೇನೋ ನೆಮ್ಮದಿ.. ಇದಕ್ಕೆಲ್ಲಾ ವಾಸ್ತುವೇ ಕಾರಣ. ಆ ಸ್ಥಳಕ್ಕೂ ನಿಮಗೂ ವಾಸ್ತು ಹೊಂದಾಣಿಕೆ ಆಗುತ್ತಿರುತ್ತದೆ.
ಪಾಸಿಟಿವ್ ಎನರ್ಜಿಗಳನ್ನು ಸರಿಯಾಗಿ ನಮಗೆ ಅನುಕೂಲಕರವಾಗುವಂತೆ ಹೊಂದಿಸುವುದೇ ವಾಸ್ತುವಿನ ಮೊದಲ ಕೆಲಸ. ಕತ್ತಲಲ್ಲಿ ಒಳ್ಳೆ ನಿದ್ದೆ ಬರುತ್ತದೆ ಅನ್ನೋದು ಸತ್ಯವಾದ್ರೂ ಸೂರ್ಯ ಬೆಳಕು ಬರಲು ಸಾಧ್ಯವೇ ಇಲ್ಲದಷ್ಟು ಕಗ್ಗತ್ತಲು ಖಂಡಿತಾ ಒಳ್ಳೆಯದಲ್ಲ. ಆಗ ನಕಾರಾತ್ಮಕ ಆಲೋಚನೆಗಳು, ಭಾವನೆಗಳು ಅಥವಾ ಅಂಥದ್ದೇ ಕನಸುಗಳೂ ಬೀಳಬಹುದು. ಇದು ನಿದ್ದೆಯನ್ನು ಮತ್ತಷ್ಟು ದೂರ ಓಡಿಸಬಲ್ಲದು.

ಮಲಗುವ ಕೋಣೆಯ ಕಿಟಕಿಗಳನ್ನು ತೆರೆಯಿರಿ:
ಅಷ್ಟು ಚೆಂದದ ಕಿಟಕಿಯಿದ್ದರೂ ಅನೇಕರು ಅದನ್ನು ಧೂಳು ಎಂದೋ ಮತ್ತೇನೋ ಕಾರಣಕ್ಕೋ ತೆರೆಯುವುದೇ ಇಲ್ಲ. ಹಾಗೆಂದೂ ಮಾಡಬೇಡಿ. ಮನೆಯೊಳಗಿನ ನೆಗೆಟಿವ್ ಎನರ್ಜಿ ಹೊರಹೋಗುವಂತೆಯೇ ಹೊರಗಿರಬಹುದಾದ ಪಾಸಿಟಿವ್ ಎನರ್ಜಿ ಮನೆಯೊಳಗೆ ಓಡಾಡಲೂ ಕಿಟಕಿಗಳು ಬಹಳ ಮುಖ್ಯ. ದಿನದ ಕೆಲ ಸಮಯವಾದರೂ ಕಿಟಕಿಗಳನ್ನು ತೆರೆದಿರಿ.
ಹಾಸಿಗೆ ಎದುರು ಕನ್ನಡಿ ಇಟ್ಟಿದ್ದೀರಾ?
ಹಾಸಿಗೆಯ ಎದುರು ಯಾವುದೇ ಕಾರಣಕ್ಕೂ ಕನ್ನಡಿಯನ್ನು ಇಡಲೇಬೇಡಿ ಎನ್ನುತ್ತಾರೆ ವಾಸ್ತು ತಜ್ಞರು. ಕನ್ನಡಿ ನಮ್ಮ ಪ್ರತಿಬಿಂಬವನ್ನು ತೋರಿಸುತ್ತದೆ. ಆದ್ರೆ ಇದೇ ಪ್ರತಿಬಿಂಬ ಪತಿ ಪತ್ನಿ ಅಲ್ಲದೇ ಮೂರನೇ ಛಾಯೆಯನ್ನೂ ಸೂಚಿಸುತ್ತದೆ. ಅಂದರೆ ಇದು ವೈವಾಹಿಕ ಬದುಕಿನಲ್ಲಿ ಅಸಮತೋಲನೆಯನ್ನು ತಂದೊಡ್ಡುತ್ತದೆ ಎನ್ನುತ್ತಾರವರು.
ದಿಕ್ಕಿಗೆ ತಲೆ ಹಾಕಿ ಮಲಗಿ
ವಾಸ್ತು ಪ್ರಕಾರ ನಿಮ್ಮ ಮಲಗುವ ದಿಕ್ಕು ಪಶ್ಚಿಮ ಅಥವಾ ದಕ್ಷಿಣಾಭಿಮುಖವಾಗಿ ಇರಬೇಕು. ನಿಮ್ಮ ಹಾಸಿಗೆ ಗೋಡೆ ಪಕ್ಕದಲ್ಲಿರಲಿ. ನೀವು ಮಲಗಿದಾಗ ನಿಮ್ಮ ಕಾಲುಗಳು ಉತ್ತರ ಅಥವಾ ಪಶ್ಚಿಮ ದಿಕ್ಕಿಗೆ ಇರುವಂತೆ ನೋಡಿಕೊಳ್ಳಬೇಕು. ನಿಮ್ಮ ತಲೆ ಕೂಡಾ ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ಇರಬೇಕು. ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿಗೆ ತಿರುಗಿ ಮಲಗಿದರೆ ಉತ್ತಮ ಆರೋಗ್ಯ, ಒಳ್ಳೆ ಜ್ಞಾಪಕ ಶಕ್ತಿ ದೊರೆಯುತ್ತದೆ ಎನ್ನಲಾಗಿದೆ.
ಇವೆಲ್ಲಾ ವಾಸ್ತು ಶಾಸ್ತ್ರ ಹೇಳುವ ಸಣ್ಣ ಪುಟ್ಟ ಬದಲಾವಣೆಗಳು. ಇದರೊಂದಿಗೆ ನೀವು ಮಲಗುವಾಗ ಮನಸ್ಸಿನಲ್ಲಿ ಧನ್ಯತಾಭಾವವನ್ನು ಹೊಂದಿರುವುದನ್ನು ಅಭ್ಯಾಸ ಮಾಡಿಕೊಳ್ಳಿ. ಈ ಬದುಕಿಗೆ, ದಿನಕ್ಕೆ, ಆರೋಗ್ಯಕ್ಕೆ, ಕುಟುಂಬಕ್ಕೆ ದೇವರಿಗೊಂದು ಧನ್ಯವಾದ ಹೇಳುವುದನ್ನು ರೂಢಿಸಿಕೊಳ್ಳಿ. ಅದು ಮನಸ್ಸಿಗೆ ಎಷ್ಟೋ ನೆಮ್ಮದಿ ನೀಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ