ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯೂ ಇದೆ ರುದ್ರಾಕ್ಷಿಗೆ!

ಭಾನುವಾರ, 24 ಡಿಸೆಂಬರ್ 2017 (17:04 IST)
ರುದ್ರಾಕ್ಷಿಗೂ ಧಾರ್ಮಿಕತೆಗೂ ನಂಟು ಹೆಚ್ಚು. ಹಿಂದೂ ಧರ್ಮದ ಜೊತೆಗೆ ಥಳುಕು ಹಾಕಿಕೊಂಡಿರುವ ರುದ್ರಾಕ್ಷಿಯಿಂದ ನಿಜವಾಗಿಯೂ ಆರೋಗ್ಯಕ್ಕೆ ಅನೇಕ ಉಪಯೋಗಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಆಯುರ್ವೇದಕ್ಕೆ ಎಷ್ಟು ಹಳೆಯ ಇತಿಹಾಸವಿದೆಯೋ ಹಾಗೆಯೇ ರುದ್ರಾಕ್ಷಿಗೂ ಅಂಥದ್ದೇ ಇತಿಹಾಸವಿದೆ.

ಆರೋಗ್ಯಕರ ನೆಮ್ಮದಿಯ ಜೀವನಕ್ಕೆ ನಂಟೂ ಇದೆ. ಋಷಿ ಮುನಿಗಳ ಏಕಾಗ್ರತೆ, ರೋಗವಿಲ್ಲದೆ ಬದುಕುತ್ತಿದ್ದುದಕ್ಕೂ ಈ ರುದ್ರಾಕ್ಷಿಯೂ ಕಾರಣ. ಇಂತಿಪ್ಪ ರುದ್ರಾಕ್ಷಿಯತ್ತ ಇದೀಗ ವಿದೇಶೀಯರೂ ಆಕರ್ಷಿತರಾಗುತ್ತಿದ್ದಾರೆ. ಜೊತೆಗೆ, ರುದ್ರಾಕ್ಷಿ ಫ್ಯಾಷನ್ ಸ್ಟೇಟ್‌ಮೆಂಟ್ ಕೂಡಾ ಆಗಿ ಬದಲಾಗುತ್ತಿದೆ. ರುದ್ರಾಕ್ಷಿಯ ಸರ, ನೆಕ್ಲೇಸ್, ಬಳೆ, ಕಿವಿಯೋಲೆಗಳ ಮೂಲಕ ಯುವಜನರನ್ನು ಆಕರ್ಷಿಸಲಾಗುತ್ತಿದೆ. ಹಾಗಾಗಿಯೋ ಏನೋ, ರುದ್ರಾಕ್ಷಿಯ ಮಾರ್ಕೆಟಿಂಗ್ ತಂತ್ರಗಳಿಂದಾಗಿಯೋ ಏನೋ ಎಂಬಂತೆ ರುದ್ರಾಕ್ಷಿ ಕೇವಲ ಶ್ರೀಮಂತರ, ಫ್ಯಾಷನ್ ಪ್ರಿಯರ ಸರಕಾಗಿಯೂ ಕಾಣಿಸಲು ಆರಂಭವಾಗಿದೆ.
 
ರುದ್ರ ಎಂದರೆ ಶಿವ, ಅಕ್ಷಿ ಎಂದರೆ ಕಣ್ಣು. ಶಿವನ ಕಣ್ಣಿನ ಬಿಂದು ಅರ್ಥಾತ್ ಕಣ್ಣೀರಿನಿಂದ ಹುಟ್ಟಿದ ಸಸ್ಯದಲ್ಲಿ ಬೆಳೆದ ಕಾಯಿಯೇ ರುದ್ರಾಕ್ಷಿ ಎಂಬ ಉಲ್ಲೇಖ ಪುರಾಣದ್ದು. ಇಂತಹವೆಲ್ಲಾ ಪುರಾಣ ಬಿಡಿ ಎಂದು ರುದ್ರಾಕ್ಷಿಯನ್ನು ನಿರ್ಲಕ್ಷಿಸಲು ಕಾರಣವೇ ಇಲ್ಲ. ವಿಚಿತ್ರವೆಂದರೆ, ಬಹುತೇಕರಿಗೆ ರುದ್ರಾಕ್ಷಿಯಲ್ಲಿ ಇಂತಹ ಶಕ್ತಿಯಿದೆ ಎಂಬುದೇ ತಿಳಿದಿಲ್ಲ. ಮಾರುಕಟ್ಟೆ ತಂತ್ರಗಳಿಗಾಗಿಯೋ, ಇತ್ತೀಚೆಗೆ ಜನಪ್ರಿಯವಾಗುತ್ತಿರುವ, ಶ್ರೀಮಂತರಿಗಾಗಿಯೇ ಮೀಸಲಿಟ್ಟಿರುವಂಥ ಧ್ಯಾನ ಕೇಂದ್ರಗಳಿಂದಾಗಿಯೋ ಬಹುತೇಕ ಬಡ, ಮಧ್ಯಮ ವರ್ಗದ ಮಂದಿ ರುದ್ರಾಕ್ಷಿಯ ಸುದ್ದಿಗೇ ಹೋಗುವುದಿಲ್ಲ. ಆದರೆ ನಿಜಕ್ಕೂ ರುದ್ರಾಕ್ಷಿಯಲ್ಲಿ ದಿವ್ಯ ಶಕ್ತಿಯಿದೆ. ಧಾರ್ಮಿಕವಾಗಿ ಹೇಳುವುದಕ್ಕಿಂತಲೂ ವೈಜ್ಞಾನಿಕವಾಗಿ ಸಾಬೀತು ಪಡಿಸಲಾದ ಆರೋಗ್ಯಕರ ಗುಣಗಳಿವೆ. ಎಷ್ಟೋ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ ಎಂಬುದು ನಿಜ.
 
ಎಲೋಕಾರ್ಪಸ್ ಗ್ರಾನಿಟ್ರಸ್ ಎಂಬ ವೈಜ್ಞಾನಿಕ ನಾಮಧೇಯ ಹೊಂದಿರುವ ರುದ್ರಾಕ್ಷಿ ವಿಜ್ಞಾನದ ಪ್ರಕಾರ ಮಾನವ ದೇಹಕ್ಕೆ ಪಾಸಿಟಿವ್ ಎನರ್ಜಿಯನ್ನು ನೀಡುವ ಮೂಲ. ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟೋ ಕಾಯಿಲೆಗಳನ್ನು ವಾಸಿ ಮಾಡುವ ಮ್ಯಾಗ್ನೆಟಿಕ್ ಥೆರಪಿಗಿಂತಲೂ ರುದ್ರಾಕ್ಷಿ ಥೆರಪಿ ನಿಜಕ್ಕೂ ಉತ್ತಮ ಪರಿಣಾಮಕಾರಿ ಫಲಗಳನ್ನು ನೀಡಿದ ಉದಾಹರಣೆಗಳು ಕಣ್ಣ ಮುಂದಿವೆ. ಅತಿ ಮಾನಸಿಕ ಒತ್ತಡ, ಖಿನ್ನತೆ, ಹೈಪರ್ ಟೆನ್ಶನ್, ಆಗಾಗ ಬದಲಾಗುವ ಮೂಡ್, ರಕ್ತದೊತ್ತಡ ಸಮಸ್ಯೆ, ಹೃದಯ ಸಮಸ್ಯೆ ಮತ್ತಿತರ ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಈ ರುದ್ರಾಕ್ಷಿಯಲ್ಲಿದೆ. ಬನಾರಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ.ಸುಹಾಸ್ ರೈ ಹಾಗೂ ಅವರ ತಂಡ ಈ ರುದ್ರಾಕ್ಷಿಯಲ್ಲಿ ನಿಜಕ್ಕೂ ಅತ್ಯುತ್ತಮ ವೈದ್ಯಕೀಯ ಗುಣಗಳನ್ನು ಹೊಂದಿದ್ದು, ಅದರಲ್ಲೂ ವಿವಿಧ ಮುಖಗಳ ಆಧಾರದಲ್ಲಿ ವಿವಿಧ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಶೋದಿಸಿದ್ದಾರೆ.
 
ಕೆಲವರಿಗೆ ಈ ರುದ್ರಾಕ್ಷಿ ಮರದಲ್ಲಿ ಬೆಳೆಯುವ ಕಾಯಿ ಎಂಬುದೇ ಗೊತ್ತಿಲ್ಲ. ಉತ್ತರ ಭಾರತ, ನೇಪಾಳ, ಛತ್ತೀಸ್ ಘಡದ ಅರಣ್ಯ ಮತ್ತಿತರ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುವ ರುದ್ರಾಕ್ಷಿ ದಕ್ಷಿಣ ಭಾರತದಲ್ಲಿ ತೀರಾ ಕಡಿಮೆ. ಆದರೂ, ನೀಲಗಿರಿ ಪರ್ವತ ಶ್ರೇಣಿ, ಪಶ್ಚಿಮ ಘಟ್ಟಗಳಲ್ಲಿ ಕೆಲವು ರುದ್ರಾಕ್ಷಿ ಮರಗಳಿವೆ. ನಮ್ಮ ಬಹುತೇಕ ಕಾಯಿಲೆಗಳಿಗೆ ರಕ್ತ ಪರಿಚಲನೆ ಸರಿಯಾಗಿ ಆಗದಿರುವುದೂ ಕೂಡಾ ಕಾರಣ. ಈ ರುದ್ರಾಕ್ಷಿಯ ಧಾರಮೆಯಿಂದ ನಮ್ಮ ರಕ್ತ ಪರಿಚಲನೆ ಸರಾಗವಾಗುತ್ತದೆ. ಹಾಗಾಗಿ ಕಾಯಿಲೆಗಳೂ ದೂರ ಉಳಿಯುತ್ತವೆ. ರಾತ್ರಿ ಬಿಸಿ ಮಾಡಿದ ನೀರಿಗೆ ಇಡೀ ರುದ್ರಾಕ್ಷಿಯೊಂದನ್ನು ಹಾಕಿ ಮಾರನೇ ದಿನ ರುದ್ರಾಕ್ಷಿ ಹೊರತೆಗೆದು ನೀರು ಕುಡಿದರೆ ರಕ್ತದೊತ್ತಡ, ಹೃದಯದ ತೊಂದರೆ ಮುಂತಾದ ರೋಗಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರುದ್ರಾಕ್ಷಿ ಕಾಯಿಗಳನ್ನು ಅದರಲ್ಲಿರುವ ಮುಖಗಳ ಆಧಾರದಲ್ಲಿ ವರ್ಗೀಕರಿಸಲಾಗುತ್ತದೆ. ಕಾಯಿಗಳಲ್ಲಿರುವ ಗೆರೆಯ ಆಧಾರದಲ್ಲಿ ಮುಖಗಳನ್ನು ನಿರ್ಧರಿಸಲಾಗುತ್ತದೆ. 
 
ಏಕಮುಖ ರುದ್ರಾಕ್ಷಿ- ಅಸ್ತಮಾ, ಟಿಬಿ, ಪಕ್ಷಪಾತ, ಹೃದಯ ಸಂಬಂಧೀ ಕಾಯಿಲೆಗಳು, ಮಾನಸಿಕ ಒತ್ತಡ, ಕಣ್ಣಿನ ತೊಂದರೆಗಳು, ಎಲುಬು ಸಂಬಂಧೀ ನೋವು, ತಲೆನೋವು ಇತ್ಯಾಂದಿ ರೋಗಗಳನ್ನು ಗುಣಮುಖವಾಗಿಸುವ ಶಕ್ತಿಯಿದೆ.
 
ಎರಡು ಮುಖದ ರುದ್ರಾಕ್ಷಿ- ಏಕಾಗ್ರತೆಯ ಕೊರತೆ, ಒತ್ತಡ, ಖಿನ್ನತೆ, ಕಣ್ಣಿನ ತೊಂದರೆ, ಹಿಸ್ಟೀರಿಯಾ, ಕರುಳಿನ ತೊಂದರೆಗಳಿಗೆ ಇದು ಉಪಯುಕ್ತ.
 
ಮೂರು ಮುಖಗಳ ರುದ್ರಾಕ್ಷಿ- ಖಿನ್ನತೆ, ಮರೆಗುಳಿ, ರಕ್ತದೊತ್ತಡ, ಸ್ತ್ರೀಯರ ಮುಟ್ಟು ಸಮಸ್ಯೆಗಳು, ಜ್ವರ ಹಾಗೂ ದುರ್ಬಲತೆ ಮತ್ತಿತರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
 
ನಾಲ್ಕು ಮುಖಗಳ ರುದ್ರಾಕ್ಷಿ- ರಕ್ತ ಪರಿಚಲನೆಗೆ ಸಹಾಯ ಮಾಡುವ ಈ ರುದ್ರಾಕ್ಷಿ ಕೆಮ್ಮು, ಮೆದುಳು ಸಂಬಂಧಿ ತೊಂದರೆಗಳು, ಅಸ್ತಮಾ, ಉಗ್ಗು, ಮರೆಗುಳಿ, ಉಸಿರಾಟದ ತೊಂದರೆಗಳನ್ನು ಗುಣಪಡಿಸುವಲ್ಲಿ ನೆರವಾಗುತ್ತದೆ.
 
ಐದು ಮುಖಗಳ ರುದ್ರಾಕ್ಷಿ- ರಕ್ತದೊತ್ತದ, ಮಾನಸಿಕ ತೊಂದರೆ, ಬೊಜ್ಜು, ಹೃದಯ ಸಂಬಂಧೀ ರೋಗಗಳು, ಅತಿ ಕೋಪ, ಮಧುಮೇಹ, ನರ ದೌರ್ಬಲ್ಯ ಮತ್ತಿತರ ತೊಂದರೆಗಳಿಗೆ ಪರಿಹಾರ ನೀಡುತ್ತದೆ.
 
ರುದ್ರಾಕ್ಷಿಯಲ್ಲಿ 14 ಹಾಗೂ ಅದಕ್ಕಿಂತಲೂ ಹೆಚ್ಚಿನ ಮುಖಗಳುಳ್ಳ ರುದ್ರಾಕ್ಷಿಗಳು ಇವೆ. ಹೆಚ್ಚಿನ ಮುಖಗಳುಳ್ಳ ರುದ್ರಾಕ್ಷಿಯಿಂದ ರಿಕೆಟ್ಸ್, ಆಸ್ಟಿಯೋ ಪೆರೋಸಿಸ್, ಬೆನ್ನು ನೋವು, ಮದ್ಯಪಾನ ವ್ಯಸನ, ಚರ್ಮದ ಕಾಯಿಲೆಗಳು, ಸರಣಿ ಗರ್ಭಪಾತ ಮತ್ತಿತರ ತೊಂದರೆಗಳಿಗೂ ಪರಿಹಾರ ದೊರೆಯುತ್ತದೆ.
 
ಹಾಂ, ಅಂದಹಾಗೆ, ರುದ್ರಾಕ್ಷಿಯ ಹೆಸರಿನಲ್ಲಿ ಮೋಸ ಮಾಡಿ ನಂಬಿಸಿ ದುಡ್ಡು ಪಡೆಯುವ ಮಂದಿಯೂ ಇಲ್ಲದಿಲ್ಲ. ಹಾಗಾಗಿ ನಿಜವಾದ ಅಸಲಿ ರುದ್ರಾಕ್ಷಿ ಕೊಳ್ಳಲು ಹೋಗಿ ನಕಲಿ ರುದ್ರಾಕ್ಷಿಯಿಂದ ಮೋಸಹೋಗುವವರೇ ಹೆಚ್ಚು. ಅಸಲಿ ರುದ್ರಾಕ್ಷಿ ಎಂದು ತಿಳಿಯಲು ಕೆಲವು ಉಪಾಯಗಳಿವೆ. ರುದ್ರಾಕ್ಷಿಯನ್ನು ನೀರಿಗೆ ಹಾಕಿದಾಗ ಅದು ಮುಳುಗಿದರೆ ಅದು ಅಸಲಿ, ತೇಲಿದರೆ ನಕಲಿ. ರುದ್ರಾಕ್ಷಿಯನ್ನು ನೀರಿನಲ್ಲಿ ಹಾಕಿ ನಾಲ್ಕೈದು ಗಂಟೆ ಕುದಿಸಿದರೂ ಅದು ಕರಗದೆ ಬೇಯದೆ ಮೊದಲು ಇದ್ದಂತೇ ಇದ್ದರೆ ಅದು ಅಸಲಿ, ಕರಗಿ ಹಾಳಾದರೆ ನಕಲಿ ಎಂಬುದು ನಿಮಗೆ ನೆನಪಿರಲಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ