ಢಾಕಾ: ಬಾಂಗ್ಲಾದೇಶದಲ್ಲಿ ಇಂದು ಸಾರ್ವರ್ತಿಕ ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ಶೇಖ್ ಹಸೀನಾ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗುವ ನಿರೀಕ್ಷೆಯಿದೆ.
ಬಾಂಗ್ಲಾದೇಶದಲ್ಲಿ ವಿಪಕ್ಷಗಳ ಪ್ರತಿಭಟನೆ, ಚುನಾವಣೆ ಬಹಿಷ್ಕಾರದ ನಡುವೆಯೂ ಇಂದು ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬೆಳಿಗ್ಗೆ 8 ರಿಂದ ಪೋಲಿಂಗ್ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಕಳೆದ ಅಕ್ಟೋಬರ್ ನಿಂದ ವಿಪಕ್ಷಗಳು ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ. ಜೊತೆಗೆ ಹಂಗಾಮಿ ಸರ್ಕಾರ ನೇಮಿಸಿ ಅದರ ನೇತೃತ್ವದಲ್ಲಿ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸುತ್ತಿದ್ದವು. ಆದರೆ ಆ ರೀತಿ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಪ್ರಧಾನಿ ಶೇಖ್ ಹಸೀನಾ ಹೇಳಿದ್ದರು.
ಆದರೆ ಚುನಾವಣೆಯಲ್ಲಿ ಡಮ್ಮಿ ಅಭ್ಯರ್ಥಿಗಳನ್ನು ನಿಲ್ಲಿಸಿ ಅಕ್ರಮವೆಸಗಲಾಗುತ್ತಿದೆ. ಶೇಖ್ ಹಸೀನಾ ಅಕ್ರಮವಾಗಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳು ಚುನಾವಣೆ ಬಹಿಷ್ಕರಿಸಿವೆ. ಹೀಗಾಗಿ ಮತ್ತೆ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷವೇ ಅಧಿಕಾರಕ್ಕೇರುವ ಎಲ್ಲಾ ಸಾಧ‍್ಯತೆಗಳಿವೆ.