ಇಸ್ಲಾಮಾಬಾದ್ : ಯುಎಸ್ ಮತ್ತು ದೇಶದ ಪ್ರತಿಪಕ್ಷಗಳು ನನ್ನನ್ನು ಪದಚ್ಯುತಗೊಳಿಸಲು ಕೈಜೋಡಿಸಿವೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಶನಿವಾರ ಆರೋಪಿಸಿದರು.
ಕರಾಚಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಅವರು ಯಾವಾಗಲೂ ಜಾಗತಿಕ ವೇದಿಕೆಗಳಲ್ಲಿ ಭಾರತ, ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್ ರಾಷ್ಟ್ರಗಳನ್ನು ಟೀಕಿಸುತ್ತಿದ್ದರು.
ಆದರೆ ನಾನು ಈ ಮೂರು ರಾಷ್ಟ್ರಗಳ ವಿರೋಧಿಯಲ್ಲ ಎಂದು ತಿಳಿಸಿದರು. ನಾನು ಯಾವುದೇ ದೇಶದ ವಿರೋಧಿಯಲ್ಲ. ನಾನು ಭಾರತ ವಿರೋಧಿಯೂ ಅಲ್ಲ, ಯುರೋಪ್ ವಿರೋಧಿಯೂ ಅಲ್ಲ, ಅಮೆರಿಕದ ವಿರೋಧಿಯೂ ಅಲ್ಲ.
ನಾನು ಮಾನವೀಯತೆಗೆ ಹೆಚ್ಚು ಒತ್ತುಕೊಡುತ್ತೇನೆ. ನಾನು ಯಾವುದೇ ಸಮುದಾಯದ ವಿರೋಧಿಯಲ್ಲ ಎಂದು ಭಾಷಣ ಮಾಡುವಾಗ ಹೇಳಿದರು.
ನಾನು ಯಾವ ದೇಶದ ವಿರುದ್ಧ ನಡೆದುಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ವಿದೇಶಿ ಸಂಚು ರೂಪಿಸಲಾಗಿದೆ. ಇವರ ಜೊತೆಗೆ ದೇಶದ ಪ್ರತಿಪಕ್ಷಗಳು ಸೇರಿಕೊಂಡಿವೆ ಎಂದು ಆರೋಪಿಸಿದರು.