ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆದಾಗ ಭಾರತದ ಮೇಲೆ ನೇರ ಪರಿಣಾಮ ಬೀರದು ಎಂದು ಹೇಳಿದರೂ ಜಗತ್ತು ಪ್ರತೀ ವಿಚಾರದಲ್ಲೂ ಒಂದಕ್ಕೊಂದು ಲಿಂಕ್ ಆಗಿಯೇ ಇದೆ. ಹೀಗಾಗಿ ಭಾರತಕ್ಕೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಯುದ್ಧದ ಇಫೆಕ್ಟ್ ಕಂಡುಬರಲಿದೆ. ಅದರಲ್ಲೂ ಇಸ್ರೇಲ್ ಜೊತೆಗೆ ಅಮೆರಿಕಾ, ಬ್ರಿಟನ್ ನಂತಹ ರಾಷ್ಟ್ರಗಳು ನಿಂತಿದ್ದು ಮೂರನೇ ಮಹಾಯುದ್ಧವೇನಾದರೂ ಸಂಭವಿಸಿದರೆ ಭಾರತಕ್ಕೆ ಅದರ ಪರಿಣಾಮ ಖಂಡಿತಾ ಉಂಟಾಗಲಿದೆ.
ಸದ್ಯಕ್ಕೆ ಭಾರತಕ್ಕೆ ಈ ಎರಡು ರಾಷ್ಟ್ರಗಳ ಕದನದಿಂದಾಗಿ ಪರಿಣಾಮ ಬೀರುವುದು ಷೇರು ಮಾರುಕಟ್ಟೆ ಕ್ಷೇತ್ರದಲ್ಲಿ. ನಿನ್ನೆಯೇ ಕ್ಷಿಪಣಿ ದಾಳಿಗಳ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿತ್ತು. ಇದರ ಬಿಸಿ ಭಾರತ, ಚೀನಾದಂತಹ ರಾಷ್ಟ್ರಗಳಿಗೂ ತಟ್ಟಿತ್ತು.
ಮಧ್ಯಪೂರ್ವ ರಾಷ್ಟ್ರಗಳ ಆರ್ಥಿಕ ಕಾರಿಡಾರ್ ನಲ್ಲಿ ಸಾಗುವ ಸರಕು ಸಾಗಣೆ ಹಡಗುಗಳ ಸಂಚಾರಕ್ಕೆ ತೊಂದರೆಯಾಗಬಹುದು. ಇದು ಜಾಗತಿಕವಾಗಿ ಸರಕು ಹಡಗುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು ಭಾರತಕ್ಕೂ ಪರಿಣಾಮ ಬೀರಲಿದೆ. ಕೆಂಪು ಸಮುದ್ರದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದಿಂದಾಗಿ ಭಾರತದ ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಕಾರ್ಯಕ್ಕೆ ತೊಂದರೆಗಳಾಗಿವೆ. ಇದರಿಂದಾಗಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಅನ್ಯ ಮಾರ್ಗಗಳನ್ನು ಹುಡುಕಬೇಕಾಗಿದೆ. ಇದರಿಂದ ಸಾಗಣೆ ವೆಚ್ಚ ಹೆಚ್ಚಾಗುತ್ತಿದೆ. ಈ ಎರಡು ರಾಷ್ಟ್ರಗಳ ನಡುವಿನ ಕದನದಿಂದಾಗಿ ಭಾರತ-ಮಧ್ಯ ಪೂರ್ವ-ಯುರೋಪ್ ಆರ್ಥಿಕ ಕಾರಿಡಾರ್ ಅಭಿವೃದ್ಧಿಗೆ ಹೊಡೆತ ಬೀಳುತ್ತಿದೆ.