ಭವಿಷ್ಯದ ಬಗ್ಗೆ ಮೋದಿ ಮಾತನಾಡಲ್ಲ, ವೈಫಲ್ಯಗಳಿಗೆ ಬೇರೆಯವರನ್ನು ದೂರುತ್ತಾರೆ : ರಾಹುಲ್ ಗಾಂಧಿ

ಸೋಮವಾರ, 5 ಜೂನ್ 2023 (10:32 IST)
ವಾಷಿಂಗ್ಟನ್ : ಪ್ರಧಾನಿ ಮೋದಿ ಎಂದಿಗೂ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಅಲ್ಲದೇ ತಮ್ಮ ವೈಫಲ್ಯಗಳಿಗೆ ಬೇರೆಯವರನ್ನು ದೂರುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಅಮೆರಿಕಾದ ಜಾವಿಟ್ಸ್ ಸೆಂಟರ್ನಲ್ಲಿ ಭಾರತೀಯ ಡಯಾಸ್ಪೊರಾ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಈ ವೇಳೆ ಒಡಿಶಾ ರೈಲು ದುರಂತದಲ್ಲಿ ಮಡಿದವರಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹದೇ ಒಂದು ರೈಲು ಅಪಘಾತವಾಗಿತ್ತು.

ಆಗ ರೈಲು ಅಪಘಾತವಾಗಲು ಬ್ರಿಟಿಷರೇ ಕಾರಣ ಎಂದು ಕಾಂಗ್ರೆಸ್ ದೂಷಿಸಲಿಲ್ಲ. ಅದರ ಬದಲಾಗಿ ಕಾಂಗ್ರೆಸ್ ಸಚಿವರೊಬ್ಬರು, ಇದು ನನ್ನ ಜವಾಬ್ದಾರಿ, ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು. ಮೂರು ರೈಲುಗಳನ್ನು ಒಳಗೊಂಡ ಅಪಘಾತದಲ್ಲಿ ಅನೇಕರು ಸಾವನ್ನಪಿದ್ದು, ರೈಲ್ವೇ ಸುರಕ್ಷತೆಯ ಸಮಸ್ಯೆಯನ್ನು ಗಮನಕ್ಕೆ ತರಲಾಗಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ಕೆಲವೆಡೆ ಆಗ್ರಹ ಕೇಳಿಬರುತ್ತಿದೆ ಎಂದರು. 

ಪ್ರಧಾನಿ ಮೋದಿ ಭವಿಷ್ಯದ ಬಗ್ಗೆ ಮಾತನಾಡುವುದನ್ನು ನೀವು ಎಂದಿಗೂ ನೋಡುವುದಿಲ್ಲ. ಅವರು ಭೂತಕಾಲದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಬಿಜೆಪಿ ಮತ್ತು ಆರ್ಎಸ್ಎಸ್ ಭವಿಷ್ಯವನ್ನು ನೋಡಲು ಅಸಮರ್ಥವಾಗಿದೆ. ಅವರು ಎಂದಿಗೂ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಕೇವಲ ಭೂತಕಾಲದ ಬಗ್ಗೆ ಮಾತನಾಡಿ ಅದಕ್ಕೆ ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ