ವಾಷಿಂಗ್ಟನ್ : ಅಮೆರಿಕದಲ್ಲಿ ಮಂಕಿಪಾಕ್ಸ್ ಆತಂಕ ಇನ್ನಷ್ಟು ಹೆಚ್ಚುತ್ತಿದೆ. ಇಬ್ಬರು ಸಣ್ಣ ಮಕ್ಕಳಲ್ಲಿ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿದೆ.
ಈಗಾಗಲೇ ಹಲವು ದೇಶಗಳಲ್ಲಿ ಮಂಕಿಪಾಕ್ಸ್ ಸೋಂಕು ಉಲ್ಬಣಿಸುತ್ತಿದೆ. ಮಂಕಿಪಾಕ್ಸ್ ಸೋಂಕು ಮಕ್ಕಳಿಗೆ ಕೊರೊನಾ ಸೋಂಕಿಗಿಂತ ಡೇಂಜರ್ ಆಗಬಹುದು ಎಂದು ವರದಿಯೊಂದು ಹೊರಬಿದ್ದ ಬೆನ್ನಲ್ಲೇ ಅಮೆರಿಕದಲ್ಲಿ ಇಬ್ಬರು ಮಕ್ಕಳಿಗೆ ಮಂಕಿಪಾಕ್ಸ್ ಸೋಂಕು ತಗುಲಿರೋದು ದೃಢವಾಗಿದೆ. ಇಬ್ಬರು ಮಕ್ಕಳ ಪೈಕಿ ಸೋಂಕಿಗೆ ತುತ್ತಾಗಿರುವ ಒಂದು ಮಗು ಇನ್ನೂ ಅಂಬೆಗಾಲು ಇಡುತ್ತಿರುವುದಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಮೆರಿಕ ಕೇಂದ್ರ ಆರೋಗ್ಯ ಇಲಾಖೆ, ಇಬ್ಬರು ಮಕ್ಕಳಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದೆ. ಈ ಪೈಕಿ ಮೊದಲ ಪ್ರಕರಣ ಕ್ಯಾಲಿಫೋರ್ನಿಯಾದಲ್ಲಿ ಅಂಬೆಗಾಲಿಡುವ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇನ್ನೊಂದು ಮಗು ಯುಎಸ್ ನಿವಾಸಿಯಲ್ಲ ಆದರೆ ಸದ್ಯ ದೇಶದಲ್ಲಿ ಇದ್ದು ಸೋಂಕು ತಗುಲಿದೆ ಎಂದು ಸ್ಪಷ್ಟಪಡಿಸಿದ್ದು, ಸದ್ಯ ಸೋಂಕಿತ ಮಕ್ಕಳು ಆರೋಗ್ಯದಿಂದ ಇರುವುದಾಗಿ ತಿಳಿಸಿದೆ.
ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈ ಇಬ್ಬರಿಗೂ ಮನೆಯವರಿಂದಲೇ ಸೋಂಕು ತಗುಲಿರುವ ಶಂಕೆ ಇದ್ದು, ಈ ಬಗ್ಗೆ ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಎರಡು ಮಕ್ಕಳ ಪ್ರಕರಣಗಳ ಜೊತೆಗೆ, ಈವರೆಗೆ ಅಮೆರಿಕದಲ್ಲಿ 2,500ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಕನಿಷ್ಠ ಎಂಟು ಮಹಿಳೆಯರು ಸೋಂಕಿಗೆ ತುತ್ತಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.